ಸುವರ್ಣ ತ್ರಿಭುಜ ಬೋಟ್ ದುರಂತ: ನೌಕಾ ಪಡೆಗೆ ಪತ್ರ ಬರೆದು ತನಿಖೆಗೆ ಆಗ್ರಹ- ಎಂ.ಬಿ.ಪಾಟೀಲ್

Update: 2019-05-08 12:42 GMT

ವಿಜಯಪುರ, ಮೇ 8: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ದೋಣಿಗೆ ಸೇನೆಯ ನೌಕೆ ಢಿಕ್ಕಿ ಹೊಡೆದಿರುವ ಸಾಧ್ಯತೆಗಳಿರುವ ಕುರಿತು ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಆಂತರಿಕ ಭದ್ರತೆ ವಿಭಾಗದ ಡಿಜಿ ಮೂಲಕ ನೌಕಾ ಪಡೆಗೆ ಪತ್ರ ಬರೆಯಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ತ್ರಿಭುಜ ದೋಣಿಯ ಅವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿವೆ. ಆದರೆ, ಮೀನುಗಾರರ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ನೌಕಾಪಡೆಗೆ ಕೋರಲಾಗುವುದು ಎಂದರು.

ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿಗೆ ಸಲಹೆ ನೀಡಲಾಗಿದೆ. ಸಚಿವರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಸಭೆ ನಡೆಸಬಹುದಾಗಿದ್ದು, ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಸಡಿಲಿಸಿದೆ ಎಂದು ಅವರು ಹೇಳಿದರು. ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ ನೀರು ಬಿಡುವುದರ ಜೊತೆ ಮೂವತ್ತು ಕೆರೆಗಳಿಗೆ ವಾರದಲ್ಲಿಯೆ ನೀರು ಹರಿಯಲಿದೆ. ಈಗಾಗಲೇ ವಿಜಯಪುರ, ದೇವರಹಿಪ್ಪರಗಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗಿದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ಬಿಡುತ್ತಿರುವ ನೀರು ಸಾಕಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಮೇ 23ರ ಬಳಿಕ ರಾಜ್ಯದ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಅವರ ಯಾವ ಹೇಳಿಕೆಗಳಿಗೂ ನಾನು ಪ್ರತಿಕ್ರಿಯಿಸುವುದಿಲ್ಲ. ಅವರದ್ದು ಕೇವಲ ಮನೋರಂಜನೆಯ ಹೇಳಿಕೆಗಳು ಎಂದರು.

ಎಂ.ಬಿ.ಪಾಟೀಲ್ ಬಿಜೆಪಿಗೆ ಬಂದರೆ ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ. ಅಗತ್ಯವಿದ್ದಲ್ಲಿ ನನ್ನ ಅಧಿಕಾರವನ್ನು ಅವರಿಗಾಗಿ, ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ ಎಂದು ಹೇಳಿರುವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ನಾನು ಯಾವತ್ತೂ ಬಿಜೆಪಿಯ ಬಾಗಿಲು ತಟ್ಟಿಲ್ಲ. ಯತ್ನಾಳ್ ಜೊತೆ ಇರುವ ಸ್ನೇಹವೇ ಬೇರೆ, ರಾಜಕಾರಣವೇ ಬೇರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವುದಾಗಿ ಆರೋಪಿಸಿ ಬಿಜೆಪಿಯವರು ನನ್ನ ವಿರುದ್ಧ ಮಾಡಿರುವ ಪ್ರತಿಭಟನೆಯನ್ನು ನಾನು ನಿರ್ಲಕ್ಷಿಸುತ್ತೇನೆ. ಕಾನೂನು ಎಲ್ಲ ವಿಚಾರಗಳಲ್ಲೂ ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News