×
Ad

ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ: ಎಚ್.ವಿಶ್ವನಾಥ್

Update: 2019-05-08 19:21 IST

ಬೆಂಗಳೂರು, ಮೇ 8: ‘ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಲು ಸದ್ಯಕ್ಕೆ ಯಾವ ಮಾರ್ಗವೂ ಇಲ್ಲ. ಎಲ್ಲ ಸಮಾನ ಮನಸ್ಕರು ಸೇರಿದರೂ ಕಾಂಗ್ರೆಸ್‌ಗೆ 113 ಶಾಸಕರ ಬೆಂಬಲ ಇಲ್ಲ. ಹೀಗಾಗಿ ಅವರು ಸಿಎಂ ಆಗಲು ಸಾಧ್ಯವಿಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಹೇಳುತ್ತಿದ್ದಾರೆ. ಆದರೆ, ಸಿಎಂ ಆಗಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಆಕ್ಷೇಪಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯ ಬಿ-ಟೀಮ್ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಹೀಗಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದವು. ಇದಕ್ಕೆ ಜೆಡಿಎಸ್ ಕಾರಣವಲ್ಲ ಎಂದ ವಿಶ್ವನಾಥ್, ಮತ್ತೆ ಚುನಾವಣೆಗೆ ಸಜ್ಜಾಗುತ್ತಿರುವುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೈತ್ರಿ ಇಲ್ಲ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಯಾವುದೇ ಮೈತ್ರಿ ಇಲ್ಲ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಷ್ಟೇ ಮೈತ್ರಿ ಸೀಮಿತ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿರುವುದನ್ನು ನೋಡಿದರೆ ಆಡಳಿತ ಪಕ್ಷದ ವಿರುದ್ಧ ಎಂಬುದು ಸ್ಪಷ್ಟ ಎಂದು ಹೇಳಿದರು. ಕುಮಾರಸ್ವಾಮಿ ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಬಿಜೆಪಿಯವರು ದಿನ ಬೆಳಗಾದರೆ ದೇವಸ್ಥಾನಕ್ಕೆ ಹೋಗುತ್ತಾರೆಂದು ಟೀಕಿಸಿದ ವಿಶ್ವನಾಥ್, ಮೈತ್ರಿ ಸರಕಾರಕ್ಕೆ ಯಾವುದೇ ಆತಂಕವಿಲ್ಲ. ಲೋಕಸಭೆ ಚುನಾವಣೆ ಬಳಿಕ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದರು.

‘ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ತಾವು ಉತ್ತಮ ಸ್ನೇಹಿತರು. ಉಭಯ ಕುಶಲೋಪರಿ ವಿಚಾರಿಸಲು ಅವರನ್ನು ನಾನು ಭೇಟಿಯಾಗಿದ್ದೆ. ಸಹಜವಾಗಿಯೆ ಪ್ರಸಕ್ತ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು’

-ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News