'ಸಿದ್ದರಾಮಯ್ಯ ಮತ್ತೆ ಸಿಎಂ' ಹೇಳಿಕೆ ಅಪ್ರಸ್ತುತ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 8: ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಕುರಿತು ಸಚಿವರು ಮತ್ತು ಶಾಸಕರು ನೀಡಿರುವ ಹೇಳಿಕೆಗಳು ಇದೀಗ ಅಪ್ರಸ್ತುತ. ಈಗಾಗಲೇ ಹೈಕಮಾಂಡ್ 5 ವರ್ಷ ಕುಮಾರಸ್ವಾಮಿಯವರೇ ಸಿಎಂ ಘೋಷಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿ ಉಪ ಚುನಾವಣೆ ಪ್ರಚಾರ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಉಪ ಚುನಾವಣೆ ಪ್ರಚಾರಕ್ಕೆ ಸಿಎಂ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದೇವೆ ಎಂದರು.
ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೆ ನೀಡಿರುವ ಶಾಸಕರು ಹಾಗೂ ಮಂತ್ರಿಗಳು ಸಮಾಲೋಚನೆ ನಡೆಸುತ್ತೇವೆ. ಅಲ್ಲದೆ, ಇಂತಹ ಹೇಳಿಕೆಗಳನ್ನು ಏಕೆ ನೀಡಿದ್ದೀರಿ ಎಂಬ ಬಗ್ಗೆಯೂ ವಿವರಣೆ ಕೇಳಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯವರು ಹುಚ್ಚರು: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಸಾವಿಗೆ ಮೈತ್ರಿ ಸರಕಾರದ ಕಿರುಕುಳ ಕಾರಣ ಎಂಬ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರು ಹುಚ್ಚರು, ಇಂತಹ ಹೇಳಿಕೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಉಮೇಶ್ ಜಾಧವ್‌ಗೆ ರಾಜಕೀಯ ಜನ್ಮ ನೀಡಿದ್ದೆ ಕಾಂಗ್ರೆಸ್. ಆದರೆ, ಇದೀಗ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅವರ ಪುತ್ರಿ ಅನುತ್ತೀರ್ಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ. ಎಲ್ಲ ಗೊಂದಲಗಳಿಗೆ ಅವರೇ ಕಾರಣ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಬೇಹುಗಾರಿಕೆ, ಟೆಲಿಫೋನ್ ಕದ್ದಾಲಿಕೆ, ಆಡಳಿತ ಯಂತ್ರಾಂಗ ದುರ್ಬಳಕೆ ಮಾಡುವುದು ಬಿಜೆಪಿ, ಎಲ್ಲ ಮೋಸ-ವಂಚನೆ ಮಾಡುವವರು ಅವರೇ. ಇದೀಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದರು.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಸ್ಥಳೀಯ ಮುಖಂಡರಿಗೆ ಬಿಟ್ಟದ್ದು, ಬಿಜೆಪಿಯೇತರ ಎಡಪಕ್ಷಗಳು, ರೈತಸಂಘ ಸೇರಿದಂತೆ ಇನ್ನಿತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಭ್ಯಂತರವಿಲ್ಲ. ಈ ಬಗ್ಗೆ ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ’
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ