ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ: 22 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ

Update: 2019-05-08 17:36 GMT

ಬೆಂಗಳೂರು, ಮೇ 8: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 22 ಲಕ್ಷ ರೂ. ಮೌಲ್ಯದ 728 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಮ್ಮನಹಳ್ಳಿಯ ಜಾನಕಿರಾಮ್ ಲೇಔಟ್ ನಿವಾಸಿ ಅರುಣ್ (27), ಹಳೆ ಬೈಯ್ಯಪ್ಪನಹಳ್ಳಿಯ ನಿವಾಸಿ ರಾಜೇಶ್ ಯಾನೆ ಚೋಟು (26) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದರು.

ನಗರದ ಎಚ್‌ಎಸ್‌ಆರ್ ಲೇಔಟ್, ರಾಮಮೂರ್ತಿನಗರ, ತಿಲಕ್ ನಗರ, ಕೋರಮಂಗಲ, ಮತ್ತಿತರ ಕಡೆಗಳಲ್ಲಿ ಬೈಕ್‌ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರ ಸರಗಳವು ಮಾಡಿ ಪರಾರಿಯಾಗುತ್ತಿದ್ದರು. ಈ ಸಂಬಂಧ ರಚಿಸಲಾಗಿದ್ದ ಎಚ್‌ಎಸ್‌ಆರ್ ಲೇಔಟ್ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಜಪ್ತಿ ಮಾಡಲಾಗಿದ್ದು, ಇವರ ಬಂಧನದಿಂದ 20 ಸರಗಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈಶಾನ್ಯ ಭಾಗದ ಡಿಸಿಪಿ ಇಶಾಪಂಥ್ ಸೇರಿ ಪ್ರಮುಖರಿದ್ದರು.

ಶೋಧ ನಡೆಸಲಾಗುತ್ತಿದೆ

ನಗರದ ಮೆಟ್ರೋ ನಿಲ್ದಾಣವೊಂದರಲ್ಲಿ ಕಂಡು ಬಂದ ಅನುಮಾನಾಸ್ಪದ ವ್ಯಕ್ತಿ ಬಗ್ಗೆ ಶೋಧ ನಡೆಸಲಾಗುತ್ತಿದೆ. ಬೆಂಗಳೂರು ವ್ಯಾಪ್ತಿಯ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೆಟ್ರೋ ನಿಲ್ದಾಣದ ದ್ವಾರದಲ್ಲಿ ಬಂದು-ಹೋದ ವ್ಯಕ್ತಿ ಪತ್ತೆಗಾಗಿ ಎಸಿಪಿ ಮಹಂತರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ.

-ಟಿ.ಸುನೀಲ್ ಕುಮಾರ್ ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News