ಈಜಿಪ್ಟ್ ಮೂಲದ ಮಹಿಳೆಯ ಆರೋಗ್ಯ ಗಂಭೀರ: ಅಪೋಲೋ ಆಸ್ಪತ್ರೆಯ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2019-05-08 14:40 GMT

ಬೆಂಗಳೂರು, ಮೇ 8: ಅಪೋಲೋ ಆಸ್ಪತ್ರೆಯ ವೈದ್ಯರ ದುರಾಸೆಯ ಫಲವಾಗಿ ಈಜಿಪ್ಟ್ ಮೂಲದ ಮಹಿಳೆಯೊಬ್ಬರ ಜೀವನ ಗಂಭೀರ ಸ್ಥಿತಿಗೆ ತಲುಪಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜನಪರ ಸಂಘಟನೆಗಳ ವೇದಿಕೆ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ, ವಕೀಲ ಅನಂತ್‌ ನಾಯ್ಕಿ, ಜ್ವರದಿಂದ ಬಳಲುತ್ತಿದ್ದ ಮುಗ್ದ ಹರೌನ್ ಅಲಿ ಎಂಬ ಮಹಿಳೆಯು ತಪಾಸಣೆಗಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿದ್ದಾರೆ. ಅಲ್ಲದೆ, ಆಕೆಗೆ ಕ್ಯಾನ್ಸರ್ ಔಷಧವನ್ನು ನೀಡಲಾಗಿದೆ ಎಂದು ಆಪಾದಿಸಿದರು.

ಕ್ಯಾನ್ಸರ್‌ಗೆ ಸಂಬಂಧಿಸಿದ ನೋವು ತರುವ ರೋಗ ನಿರೋಧಕ ಹಾಗೂ ಇಂಪ್ಲಾಂಟಿಂಗ್ ಆಕೆಯ ದೇಹದಲ್ಲಿ ಬಿಡಲಾಗಿದೆ. ಅಲ್ಲದೆ, ಇದೇ ನೆಪವನ್ನಿಟ್ಟುಕೊಂಡು ಲಕ್ಷಾಂತರ ಹಣವನ್ನು ಸುಲಿಗೆ ಮಾಡಿದ್ದಾರೆ. ಆಕೆಯು ಗುಣಮುಖರಾಗದೇ ಇದ್ದುದರಿಂದ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಯಾವುದೇ ಕ್ಯಾನ್ಸರ್ ಇಲ್ಲವೆಂದು ಹೇಳಲಾಗಿದೆ. ಹೀಗಾಗಿ, ಹಣದ ದುರಾಸೆಗಾಗಿ ಮಹಿಳೆಯನ್ನು ಸಮಸ್ಯೆಗೆ ಸಿಲುಕಿಸಿದ ಅಪೋಲೋ ಆಸ್ಪತ್ರೆಯ ವೈದ್ಯರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು

ವೈದ್ಯರ ನಿರ್ಲಕ್ಷ್ಯ ಹಾಗೂ ದುರಾಸೆಯ ಪರಿಣಾಮದಿಂದಾಗಿ ಇದೀಗ ಅಲಿ ಆರೋಗ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈಗ ಅವರ ಮೂಳೆ ನೋವು, ಮೂಳೆ ಸವೆತ ಆರಂಭಗೊಂಡಿದೆ. ವಿಪರೀತ ತಲೆನೋವು, ಚರ್ಮದ ಮೇಲೆ ಕಡಿತ, ಅಸಿಡಿಟಿ, ಜ್ವರ ಸೇರಿದಂತೆ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಈ ಸಂಬಂಧ ತನಗಾದ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ಆಕೆಗೆ ಆಸ್ಪತ್ರೆಯ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂದು ಅವರು ತಿಳಿಸಿದರು.

ಅಲಿಯು ತನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಎ.9 ರಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಿದ್ದು, ಅದನ್ನು ಎಫ್‌ಐಆರ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅನ್ಯಾಯ ಮಾಡಿದವರ ಪರವಾಗಿಯೇ ರಕ್ಷಣೆಗೆ ನಿಂತಿದ್ದಾರೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿದೆ. ಆದುದರಿಂದಾಗಿ ಜೀವಹಾನಿ, ಕೊಲೆ ಯತ್ನ, ಜೀವ ಬೆದರಿಕೆ, ವಂಚನೆ ಸೇರಿದಂತೆ ಮತ್ತಿತರೆ ಸೆಕ್ಷನ್‌ಗಳ ಅಡಿಯಲ್ಲಿ ವೈದ್ಯರನ್ನು ಕೂಡಲೇ ಬಂದಿಸಬೇಕು ಎಂದು ಅವರು ಆಗ್ರಹಿಸಿದರು.

ಬೇಡಿಕೆಗಳು: ಭಾದಿತ ಯುವತಿ ನೀಡಿರುವ ದೂರಿನನ್ವಯ ವೈದ್ಯರನ್ನು ಬಂಧಿಸಬೇಕು, ಸೂಕ್ತ ತನಿಖೆ ನಡೆಸಬೇಕು. ಭಾರತೀಯ ವೈದ್ಯಕೀಯ ಮಂಡಳಿ ತಕ್ಷಣ ಮಧ್ಯಪ್ರವೇಶ ಮಾಡಬೇಕು. ಈ ಅಪರಾಧ ಮಾಡಿರುವ ಆಸ್ಪತ್ರೆಯ ಮಾನ್ಯತೆ ರದ್ದು ಮಾಡಬೇಕು. ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣ ಆಸ್ಪತ್ರೆಯು ಸಂತ್ರಸ್ಥೆಯ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡಬೇಕು. ಅಲಿಯನ್ನು ಈಜಿಪ್ಟ್ ಕಳುಹಿಸಿಕೊಡಲು ರಾಜ್ಯ ಗೃಹ ಇಲಾಖೆ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News