ರಾಜೀವ್ ಗಾಂಧಿ ಭ್ರಷ್ಟಾಚಾರಿ ಎಂಬ ಮೋದಿ ಹೇಳಿಕೆಗೆ ನನ್ನ ವಿರೋಧವಿದೆ: ಬಿಜೆಪಿ ನಾಯಕ ಶ್ರೀನಿವಾಸ ಪ್ರಸಾದ್

Update: 2019-05-08 17:16 GMT

ಮೈಸೂರು,ಮೇ.8: ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ಎಂದಿರುವುದು ಸರಿಯಲ್ಲ. ಈ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸುವುದು ಸರಿಯಲ್ಲ. ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚೀಟ್ ಕೊಟ್ಟಿದೆ. ಅಂತಹದರಲ್ಲಿ ಅವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್ ಗಾಂಧಿಯನ್ನು ಟೀಕಿಸುವ ಬರದಲ್ಲಿ ಲಕ್ನೋದಲ್ಲಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಸರಿಯಿಲ್ಲ. ಜಗತ್ತಿನ ಅತ್ಯಂತ ದೊಡ್ಡ ಹುದ್ದೆಯನ್ನು ರಾಜೀವ್ ಗಾಂಧಿ ಸಣ್ಣ ವಯಸ್ಸಿನಲ್ಲೇ ಅಲಂಕರಿಸಿ ಉತ್ತಮ ಆಡಳಿತ ನೀಡಿದರು. ನಾನು ಅವರು ಪ್ರಧಾನಿಯಾಗಿದ್ದಾಗ ಸಂಸದನಾಗಿ ಕೆಲಸ ಮಾಡಿದವನು. ಅವರನ್ನು ಬಹಳ ಹತ್ತಿರದಿಂದ ಬಲ್ಲವನು, ಅವರ ಅವಧಿಯಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬೊಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಕ್ಲೀನ್ ಚೀಟ್‍ ಪಡೆದಿದ್ದರು, ಅವರು ನಾನು ಹಣ ಸಂಪಾದನೆ ಮಾಡಲು ಪ್ರಧಾನಿ ಹುದ್ದೆ ಅಲಂಕರಿಸಿಲ್ಲ, ಜವಾಹರ್ ಲಾಲ್ ನೆಹರೂ ಮೊಮ್ಮಗನಾಗಿ, ಇಂದಿರಾ ಗಾಂಧಿ ಮಗನಾಗಿ ದೇಶಕ್ಕೆ ಉತ್ತಮ ಆಡಳಿತ ನೀಡಬೇಕು ಎಂದು ಬಯಸಿದವನು ಎಂದು ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಬರದಲ್ಲಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದರು.

ನನ್ನ ಹಾಗೂ ವಿಶ್ವನಾಥ್ ಭೇಟಿಗೆ ರಾಜಕೀಯ ಬಣ್ಣ ಹಚ್ಚುವುದು ಬೇಡ: ಜೆಡಿಎಸ್ ರಾಜ್ಯಧ್ಯಕ್ಷ ಎಚ್.ವಿಶ್ವನಾಥ್ ನಿನ್ನೆ ನನ್ನನ್ನು ಭೇಟಿಯಾಗಿದ್ದರು. ನಾನು ಮತ್ತು ಅವರು ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ನಾವು ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ, ಹಾಗಾಗಿ ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಹೇಳಿದರು.

ಚುನಾವಣೆ ಇದ್ದಿದ್ದರಿಂದ ನಾನು ಮತ್ತು ಅವರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ, ಆದರೆ ಈಗ ಇಬ್ಬರಿಗೂ ಕೆಲಸದ ಒತ್ತಡ ಕಡಿಮೆ ಇದ್ದಿದ್ದರಿಂದ ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News