ಮಳೆಯಿಂದಾಗುವ ಸಮಸ್ಯೆಗಳ ನಿವಾರಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಎಚ್.ಡಿ.ಕುಮಾರಸ್ವಾಮಿ

Update: 2019-05-08 15:59 GMT

ಬೆಂಗಳೂರು, ಮೇ 8: ಮಳೆಗಾಲ ಪ್ರಾರಂಭವಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಮಳೆಯಿಂದಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿವಾರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗಿವೆ. ಈ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ, ಬಿಡಿಎ ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಮಳೆ ಪರಿಣಾಮದಿಂದಾಗಿ ಬೆಂಗಳೂರಿನಲ್ಲಿ ಈಗಾಗಲೇ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ವಿದ್ಯುತ್ ಕಂಬಗಳು ಉರುಳಿವೆ. ಸಾರ್ವಜನಿಕರಿಗೆ ಹಲವು ಪ್ರದೇಶಗಳಲ್ಲಿ ತೊಂದರೆ ಉಂಟಾಗಿದೆ. ಈ ಸಂಬಂಧ ತುರ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಶಾಸಕ ಗೋಪಾಲಯ್ಯ, ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕಾ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್.ಮಂಜುಳಾ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಭಾಗವಹಿಸಿದ್ದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಈ ಕುರಿತು ಮುಖ್ಯಮಂತ್ರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿ, ಬೆಂಗಳೂರು ವಿದ್ಯುತ್ ಕಂಪನಿಯ 295 ಕಂಬಗಳು ಮುರಿದಿದ್ದು, ಅವುಗಳಲ್ಲಿ ಬೆಂಗಳೂರಿನಲ್ಲಿ 80 ಕಂಬಗಳು ಬಿದ್ದಿವೆ.  ಒಟ್ಟಾರೆ 76 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ತಿಳಿಸಿದರು.

ತೆರೆದ ವಿದ್ಯುತ್ ತಂತಿಗಳನ್ನು ಸರಿಸಪಡಿಸುವುದು, ಮುರಿದ ಮರದ ಕೊಂಬೆಗಳನ್ನು ತುಂಡರಿಸುವುದು ಹಾಗೂ ಪರಿವರ್ತಿತ ಕೇಂದ್ರಗಳ ದುರಸ್ಥಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಪೋಲಿಸರಿಂದ 134 ಅಪಾಯದ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 63 ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಹೊಸ ಅಥವಾ ಹಳೆಯ ಬಡಾವಣೆಗಳಲ್ಲಿ ವಿದ್ಯುತ್ ವಿಸ್ತರಣೆಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಬೆಸ್ಕಾಂ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇದರಿಂದಾಗಿ ವಿದ್ಯುತ್ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News