ಪಾಕಿಸ್ತಾನಿ ದಂಪತಿಗಳನ್ನು ಹಸ್ತಾಂತರಿಸಲು 2 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್

Update: 2019-05-08 16:14 GMT

ಬೆಂಗಳೂರು, ಮೇ 8: ವಿವಾಹವಾಗಲು ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿ ಜೈಲು ಸೇರಿದ ಪಾಕಿಸ್ತಾನಿ ದಂಪತಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ಕೇಂದ್ರ ಸರಕಾರ ಕಾಲಾವಕಾಶ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದಲ್ಲಿ 42 ತಿಂಗಳ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ದಂಪತಿ ಕಾಸೀಫ್ ಶಂಶುದ್ದೀನ್ ಮತ್ತು ಪತ್ನಿ ಕಿರಾಣ್ ಗುಲಾಮ್ ಅಲಿ ಎಂಬುವರು ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಪೀಠದ ಮುಂದೆ ಹಾಜರಾದ ಕೇಂದ್ರ ಸರಕಾರದ ಪರ ವಕೀಲ ಆದಿತ್ಯ ಸಿಂಗ್ ಅವರು, ಪಾಕಿಸ್ತಾನದ ದಂಪತಿ ಕಾಸೀಫ್ ಸಂಶುದ್ದೀನ್ ಮತ್ತು ಪತ್ನಿ ಕಿರಾಣ್ ಗುಲಾಮ್ ಅಲಿ ಅವರಿಗೆ 2016ರ ಮಾ.30ರಂದು ಕೇರಳದ ಇಸ್ಲಾಂ ಕಮಿಟಿವೊಂದು ಮದುವೆಯ ಪ್ರಮಾಣ ಪತ್ರವನ್ನು ನೀಡಿದೆ. ಹೀಗಾಗಿ, ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿ ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ಪ್ರಕರಣವೇನು: ಕೇರಳ ಮೂಲದ ಸಿಹಾದ್ ಅನ್ನುವ ಯುವಕ ಕರಾಚಿಯ ಸಮೀರಾ ಅನ್ನುವ ಯುವತಿಯನ್ನು ಪ್ರೀತಿಸಿದ್ದ. ಅದರಂತೆ ಮದುವೆಯಾಗಿ ಆಕೆಯ ಜೊತೆ ನಾದಿನಿ ಕಿರಾಣ್ ಗುಲಾಮ್ ಅಲಿ ಹಾಗೂ ಕಾಸೀಪ್ ಶಂಶುದ್ದೀನ್ ಅನ್ನುವವರನ್ನು ಅಕ್ರಮವಾಗಿ ನೇಪಾಳದ ಮಾರ್ಗವಾಗಿ ಭಾರತಕ್ಕೆ ಕರೆ ತಂದಿದ್ದ. ಬೆಂಗಳೂರಿಗೆ ಬಂದು ಇವರು ನಗರದ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸವಿದ್ದರು. ಈ ವಿಚಾರ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ದಾಳಿ ನಡೆಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿಯರನ್ನು ಬಂಧನ ಮಾಡಿದ್ದರು. 2017ರ ಮೇ 25ರಂದು ಇವರನ್ನು ಬಂಧನ ಮಾಡಲಾಗಿತ್ತು. ಬಂಧಿತರನ್ನು ಸೆಷನ್ಸ್ ಕೋರ್ಟ್‌ಗೆ ಒಪ್ಪಿಸಿದಾಗ ಸಿಹಾದ್, ಸಮೀರಾನನ್ನು ಮದುವೆಯಾಗಿದ್ದರಿಂದ ಅವರಿಗೆ ಭಾರತದಲ್ಲಿ ಇರಲು ಅವಕಾಶ ನೀಡಿತ್ತು. ಆದರೆ, ಸಮೀರಾ ತಂಗಿ ಮತ್ತು ಆಕೆಯ ಸಹೋದರನಿಗೆ ಸೆಷನ್ಸ್ ಕೋರ್ಟ್ 21 ತಿಂಗಳ ಕಾಲ ಜೈಲು ಶಿಕ್ಷೆ ನೀಡಿತ್ತು. ಸದ್ಯ ಇವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತಮ್ಮ ಮೇಲೆ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಕೋರಿ ಬಂಧಿತ ಕಿರಾಣ್ ಗುಲಾಮ್ ಹಾಗೂ ಕಾಸೀಫ್ ಶಂಶುದ್ದೀನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಅನ್ಯ ದೇಶದವರನ್ನು ಕೂಡಲೇ ಗಡಿಪಾರು ಮಾಡುವಂತೆ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News