ಬಿಡಿಎ ಆನ್‌ಲೈನ್ ತೆರಿಗೆ ಪಾವತಿ ಸ್ಥಗಿತ ?

Update: 2019-05-08 16:34 GMT

ಬೆಂಗಳೂರು, ಮೇ 8: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಐಟಿ ವಿಭಾಗ ಕಳೆದ ಮಾರ್ಚ್ ಅಂತ್ಯದಿಂದ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.

ಬಿಡಿಎಯ ತೆರಿಗೆ ಪರಿಷ್ಕರಣೆ ಸೇರಿ ವಿವಿಧ ಕಾರಣಗಳಿಂದ ಆನ್‌ಲೈನ್ ಪಾವತಿ ಸ್ಥಗಿತ ಮಾಡಿ ಎರಡು ತಿಂಗಳು ಕಳೆದಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ತೆರಿಗೆ ಪಾವತಿ ಪರಿಷ್ಕರಣೆ ಮಾಡಬೇಕಾದ ನಿಗಮದ ಅಧಿಕಾರಿಗಳು ಚುನಾವಣೆಯಲ್ಲಿ ಪಾಲ್ಗೊಂಡಿದ್ದರಿಂದ ಸೇವೆ ಸ್ಥಗಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಪ್‌ಡೇಟ್ ಕಾರ್ಯ ಮುಂದುವರಿಕೆ: ಲೋಕಸಭಾ ಚುನಾವಣೆಯು ಮುಗಿದಿದ್ದು, ಬಿಡಿಎಯ ಹಿರಿಯ ಅಧಿಕಾರಿಗಳು ಇದೀಗ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಬಂಧ ಮಾಹಿತಿ ಅಪ್‌ಡೇಟ್ ಮಾಡುವ ಕಾರ್ಯ ಮುಂದುವರಿಸಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ನಲ್ಲಿ ಆಸ್ತಿ ತೆರಿಗೆ ಪಾವತಿಯಾದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣವಾದ ವಿವರವನ್ನು ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ನೀಡುತ್ತಾರೆ. ಈ ಎಲ್ಲಾ ಮಾಹಿತಿ ಬಂದ ಮೇಲೆ ಅದನ್ನು ವೆಬ್ ಸೈಟ್‌ನಲ್ಲಿ ಹಾಕಲಾಗುತ್ತದೆ. ಆ ಕೆಲಸ ಈಗಾಗಲೇ ನಡೆದಿದೆ ಎಂದು ಬಿಡಿಎನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 15 ರ ಬಳಿಕ ಕಾರ್ಯನಿರ್ವಹಣೆ: ಬಿಡಿಎ ಅಧಿಕಾರಿಗಳು ವೆಬ್‌ಸೈಟ್ ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಹಲವು ತಾಂತ್ರಿಕತೆಗಳನ್ನು ಅಳವಡಿಸಿದ್ದಾರೆ. ಹೀಗಾಗಿ ಕೆಲವು ಬದಲಾವಣೆಗಳೊಂದಿಗೆ ಸಿದ್ಧವಾಗಿ, ಮೇ 15 ರ ಬಳಿಕ ಬಿಡಿಎ ಆನ್‌ಲೈನ್ ಪಾವತಿ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News