×
Ad

ಮಳೆಗೆ 50ಕ್ಕೂ ಹೆಚ್ಚು ಮರಗಳು ಧರೆಗೆ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮೇಯರ್ ಸೂಚನೆ

Update: 2019-05-08 22:09 IST

ಬೆಂಗಳೂರು, ಮೇ 8: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಸಮಸ್ಯೆಗೊಳಗಾದ ಪ್ರದೇಶಗಳಿಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ರಾತ್ರಿ ಸುಮಾರು 2ಗಂಟೆಗಳ ಕಾಲ ಸತತವಾಗಿ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. 35 ಬೃಹತ್ ಗಾತ್ರದ ಮರಗಳು ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಜನತೆ ಪ್ರಾಣಾಪಾಯದಿಂದಲೆ ಮನೆಗೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಕೆಲ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು ನಿವಾಸಿಗಳಿಗೆ ಸಾಕಷ್ಟು ಸಮಸ್ಯೆ ಈಡಾಗುವಂತೆ ಮಾಡಿದೆ. ಪ್ರತಿವರ್ಷ ಮಳೆ ಶುರುವಾದಾಗ ಇದೇ ಸಮಸ್ಯೆ ಮರುಕಳಿಸುತ್ತಿದ್ದರೂ ಈ ಸಂಬಂಧ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಿಂದಾಗಿ ಸಮಸ್ಯೆಗೆ ಕಾರಣವಾದ ಪ್ರದೇಶಗಳಿಗೆ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ, ಸ್ಥಳೀಯರ ಜೊತೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದಾಗುವ ಅನಾಹುತಗಳನ್ನು ಎದುರಿಸಲು ಹಾಗೂ ತಪ್ಪಿಸಲು ಬಿಬಿಎಂಪಿ ಸನ್ನದ್ಧವಾಗಿದೆ ಎಂದರು.

ಇದೇ ವೇಳೆ ಮಳೆಯ ಪರಿಣಾಮ ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯತ್ರಿನಗರದ ಪೂಜಾ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಅವರು, ಪೂಜಾ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದ ಭರಿಸಲಾಗುವುದು ಎಂದರು.

ನಂತರ ಯಲಹಂಕ ವಲಯ ವ್ಯಾಪ್ತಿಯ ವಾರ್ಡ್-8ರ ಕೋಡಿಗೆಹಳ್ಳಿ ವಾರ್ಡ್‌ನ ಭದ್ರಪ್ಪಬಡಾವಣೆಯ ಸ್ಥಳ ಪರಿಶೀಲನೆ ನಡೆಸಿದರು. ಭದ್ರಪ್ಪಬಡಾವಣೆಯ ಮುಖ್ಯರಸ್ತೆಯಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಗೊಂಡಿದ್ದು, ಇದರಿಂದಾಗಿ ನೀರು ಹರಿಯಲು ಸಾಧ್ಯವಾಗದೆ ರಸ್ತೆ ತುಂಬಾ ನೀರು ತುಂಬಿ ಅನಾನುಕೂಲವಾಗುತ್ತಿರುವುದನ್ನು ಗಮನಿಸಿದ ಮೇಯರ್, ಈ ಕೂಡಲೇ ಚರಂಡಿ ಕಾಮಗಾರಿಯನ್ನು ದುರಸ್ಥಿಗೊಳಿಸಿ ತಕ್ಷಣ ನೀರು ಹರಿಯಲು ಕ್ರಮ ಜರುಗಿಸಲು ಹಾಗೂ ರಸ್ತೆ ಬದಿಯಲ್ಲಿರುವ ಮಣ್ಣನ್ನು ತೆರವುಗೊಳಿಸುವಂತೆ ಆದೇಶಿಸಿದರು. ಈ ವೇಳೆ ಆಡಳಿತ ಪಕ್ಷದ ನಾಯಕ ವಾಝೀದ್ ಹಾಗೂ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News