ಪುರುಷರೇ, ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿರಲಿ

Update: 2019-05-09 06:23 GMT

ನಮ್ಮ ಶರೀರದಲ್ಲಿ ಸಣ್ಣ ಬದಲಾವಣೆಯೂ ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸಬಹುದು. ಕೆಲವೊಮ್ಮೆ ಇಂತಹ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರದಿರಬಹುದು ಮತ್ತು ಕೆಲ ಸಮಯದ ಬಳಿಕ ಮಾಯವಾಗಬಹುದು ಅಥವಾ ತಕ್ಷಣವೇ ಪ್ರಕಟಗೊಳ್ಳಬಹುದು,ಯಾತನಾದಾಯಕವಾಗಿರಬಹುದು ಮತ್ತು ಚಿಂತೆಗೆ ಕಾರಣವಾಗಬಹುದು.

ಮಹಿಳೆಯರಿಗೆ ಹೋಲಿಸಿದರೆ ಪುರುಷರು ವೈದ್ಯರ ಬಳಿಗೆ ಹೋಗುವುದು ಕಡಿಮೆ,ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆ ಕಾಡಿದಾಗ ಮಾತ್ರ ವೈದ್ಯರನ್ನು ಕಾಣುತ್ತಾರೆ. ಪುರುಷರು ಗಮನಿಸಲೇಬೇಕಾದ ಏಳು ಎಚ್ಚರಿಕೆಯ ಸಂಕೇತಗಳು ಇಲ್ಲಿವೆ....

►ಎದೆನೋವು

ನಿಮಗೆ ಆಗಾಗ್ಗೆ ಎದೆನೋವು ಬರುತ್ತಿದ್ದರೆ ಅದಕ್ಕೆ ಕಾರಣ ಬೇರ್ಯಾವುದೋ ಆರೋಗ್ಯ ಸಮಸ್ಯೆಯಿರಬಹುದು. ಪುರುಷರಲ್ಲಿ ಹೃದಯ ಸಮಸ್ಯೆಗಳು ಎದೆನೋವನ್ನುಂಟು ಮಾಡುತ್ತವೆ. ಇಂತಹ ಎಲ್ಲ ಸಮಸ್ಯೆಗಳೂ ಜೀವಕ್ಕೆ ಅಪಾಯ ತರುವುದಿಲ್ಲ,ಆದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ. ಹೃದಯಾಘಾತ, ಮಹಾಪಧಮನಿಯ ವಿಭಜನೆ,ಇಸ್ಕಿಮಿಯಾ ಅಥವಾ ಹೃದಯಕ್ಕೆ ರಕ್ತಪೂರೈಕೆಯಲ್ಲಿ ಕೊರತೆ,ಪೆರಿಕಾರ್ಡಿಟಿಸ್ ಅಥವಾ ಹೃದಯಾವರಣದ ಉರಿಯೂತ ಇವು ಎದೆನೋವನ್ನುಂಟು ಮಾಡಬಲ್ಲ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಗಳಾಗಿವೆ.

►ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕುಗಳು ಪುರುಷರಲ್ಲಿ ಅಪರೂಪವಾಗಿದ್ದರೂ,ಅವು ತಗುಲಿದಾಗ ಸಾಕಷ್ಟು ಗಂಭೀರವಾಗಿರುತ್ತವೆ. ಇವು ಸಾಮಾನ್ಯವಾಗಿ ಪ್ರಮುಖ ಮೂತ್ರಪಿಂಡ ಸಮಸ್ಯೆಗಳನ್ನು ಸೂಚಿಸುತ್ತವೆ. ಬ್ಯಾಕ್ಟೀರಿಯಾಗಳು ಮೂತ್ರ ವಿಸರ್ಜನಾ ನಾಳವನ್ನು ಪ್ರವೇಶಿಸಿ ಮತ್ತು ಬಳಿಕ ಮೂತ್ರಪಿಂಡಕ್ಕೆ ಸಾಗಿದಾಗ ಈ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಪದೇ ಪದೇ ಮೂತ್ರವಿಸರ್ಜನೆಯ ಅವಸರದಂತಹ ಮೂತ್ರಸಂಬಂಧಿ ತೊಂದರೆಗಳು ಮಧುಮೇಹದ ಸಾಮಾನ್ಯ ಲಕ್ಷಣಗಳಾಗಿವೆ.

ಜಡತ್ವ

 ಸಾಮಾನ್ಯ ನಿಶ್ಶಕ್ತಿ ಮತ್ತು ಜಡತ್ವ ಮೂತ್ರಪಿಂಡ ಸಮಸ್ಯೆಗಳ ಲಕ್ಷಣಗಳಲ್ಲೊಂದಾಗಿದೆ. ಶರೀರದಲ್ಲಿ ಆಮ್ಲ ಮತ್ತು ರಕ್ತಪ್ರವಾಹದಲ್ಲಿ ಯೂರಿಯಾ ಹೆಚ್ಚಾದಾಗ ಮೂತ್ರಪಿಂಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದಣಿವಿನ ಜೊತೆಗೆ ಹಸಿವು ಕ್ಷೀಣಿಸಬಹುದು ಮತ್ತು ಉಸಿರಾಟ ಹೆಚ್ಚು ಕಷ್ಟಕರವಾಗಬಹುದು. ಇವು ಹೃದಯ ಮತ್ತು ರಕ್ತ ಪರಿಚಲನೆ ವ್ಯವಸ್ಥೆಯ ಮೇಲೆ ಒತ್ತಡವನ್ನುಂಟು ಮಾಡಬಹುದು ಹಾಗೂ ಹೃದಯ ಅಥವಾ ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗಬಹುದು.

►ತಲೆಗೂದಲು ಉದುರುವಿಕೆ

ತಲೆಗೂದಲು ಉದುರುವುದು ಮಧ್ಯವಯಸ್ಕ ಪುರುಷರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ತೀವ್ರ ಮಾನಸಿಕ ಒತ್ತಡಗಳಲ್ಲಿರುವ ಅಥವಾ ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪುರುಷರಲ್ಲಿ ತಲೆಗೂದಲು ಕಡಿಮೆಯಾಗಬಹುದು. ಇದರ ಜೊತೆಗೆ ತಲೆಗೂದಲು ಉದುರುವುದು ಚರ್ಮಕ್ಷಯದಂತಹ ಸ್ವರಕ್ಷಿತ ಕಾಯಿಲೆಗಳು ಮತ್ತು ಸಿಫಿಲಿಸ್‌ನಂತಹ ಸೋಂಕು ರೋಗಗಳು ಹಾಗೂ ಥೈರಾಯ್ಡಿ ಸಮಸ್ಯೆಗಳಂತಹ ಹೆಚ್ಚು ಗಂಭೀರ ವೈದ್ಯಕೀಯ ಸ್ಥಿತಿಗಳ ಎಚ್ಚರಿಕೆಯ ಸಂಕೇತವೂ ಆಗಿದೆ.

►ಒತ್ತಡ

 ನೀವು ಖುಷಿ ಪಡುತ್ತಿದ್ದ ವಿಷಯಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದರೆ ಅಥವಾ ತೀವ್ರ ವಿಷಾದದ ಭಾವನೆಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಮಾನಸಿಕ ಒತ್ತಡವು ಭಾವನಾತ್ಮಕವಾಗಿ ಮಾತ್ರ ಅಲ್ಲ, ದೈಹಿಕವಾಗಿಯೂ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಹೃದ್ರೋಗಗಳು,ಅಸ್ತಮಾ,ಮಧುಮೇಹ,ಜಠರಗರುಳಿನ ಸಮಸ್ಯೆಗಳು ಮತ್ತು ಅಲ್ಝೀಮರ್ಸ್ ಕಾಯಿಲೆ ಇವು ಒತ್ತಡಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ರೋಗಗಳಾಗಿವೆ.

►ಮಚ್ಚೆಗಳು

ಮಚ್ಚೆಗಳು ಚರ್ಮದ ಮೇಲಿನ ಕಂದು ಅಥವಾ ಕಪ್ಪು ಬಣ್ಣದ ಬೆಳವಣಿಗೆಗಳಾಗಿದ್ದು,ಹೆಚ್ಚಾಗಿ ನಿರಪಾಯಕಾರಿಯಾಗಿರುತ್ತವೆ. ಹೆಚ್ಚಿನ ಮಚ್ಚೆಗಳು ಬಾಲ್ಯದಲ್ಲಿ ಮತ್ತು ವ್ಯಕ್ತಿಯ ಬದುಕಿನ ಮೊದಲ 20 ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮಚ್ಚೆಗಳು ಕ್ಯಾನ್ಸರ್‌ನ ಲಕ್ಷಣಗಳೂ ಆಗಬಹುದು. ಮಚ್ಚೆಗಳಿದ್ದಾಗ ಚರ್ಮ ಕ್ಯಾನ್ಸರ್‌ನ ಗಂಭೀರ ರೂಪವಾಗಿರುವ ಮೆಲನೋಮಾ(ಚರ್ಮಕೋಶಗಳಲ್ಲಿ ಗಂತಿಗಳು ಉಂಟಾಗುವ ಸ್ಥಿತಿ)ಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿಮ್ಮ ಮೈಮೇಲಿರುವ ಮಚ್ಚೆಗಳ ಆಕಾರ ಅಥವಾ ಬಣ್ಣದಲ್ಲಿ ಏನಾದರೂ ಬದಲಾವಣೆಯಿದೆಯೇ ಎನ್ನುವುದನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ. ಮಚ್ಚೆಯಲ್ಲಿ ಬದಲಾವಣೆ ಕಂಡು ಬಂದರೆ,ತುರಿಸುತ್ತಿದ್ದರೆ ಅಥವಾ ರಕ್ತಸ್ರಾವವಾಗುತ್ತಿದ್ದರೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

►ವೃಷಣಗಳಲ್ಲಿ ಗಂಟುಗಳು

ಪುರುಷರು ತಮ್ಮ ವೃಷಣಗಳಲ್ಲಿ ಏನಾದರೂ ಅಸಾಮಾನ್ಯತೆ ಅಥವಾ ಗಂಟುಗಳನ್ನು ಗಮನಿಸಿದರೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಂತಹ ಎಲ್ಲ ಗಂಟುಗಳೂ ಕ್ಯಾನ್ಸರ್ ಅಲ್ಲ, ಆದರೂ ತಪಾಸಣೆಗೊಳಗಾಗುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News