ಭಾರತದ ಆರ್ಥಿಕತೆಗೆ ಬಿಕ್ಕಟ್ಟಿನ ಕರಾಳ ಛಾಯೆ: ಮೋದಿ ಆರ್ಥಿಕ ಸಲಹಾ ಮಂಡಳಿಯ ತಜ್ಞ

Update: 2019-05-09 03:43 GMT

ಹೊಸದಿಲ್ಲಿ, ಮೇ 9: ಭಾರತೀಯ ಆರ್ಥಿಕತೆಗೆ ರಚನಾತ್ಮಕ ಬಿಕ್ಕಟ್ಟಿನ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಕ್ರಮೇಣ ಬ್ರೆಝಿಲ್ ಅಥವಾ ದಕ್ಷಿಣ ಆಫ್ರಿಕಾದ ಸ್ಥಿತಿ ಎದುರಾಗಲಿದೆ ಎಂದು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯ ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ನಿರ್ದೇಶಕ ರತಿನ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಪ್ರಗತಿ ಕುಂಠಿತವಾಗುತ್ತಿರುವ ಬಗೆಗೆ ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ ರಾಯ್ ವ್ಯಕ್ತಪಡಿಸಿದ ಅಭಿಪ್ರಾಯ ವಿಶೇಷ ಮಹತ್ವ ಪಡೆದಿದೆ.

2019ರ ಮಾರ್ಚ್ ತಿಂಗಳ ಮಾಸಿಕ ಆರ್ಥಿಕ ವರದಿಯಲ್ಲಿ ಹಣಕಾಸು ಸಚಿವಾಲಯ, "2018-19ರಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ವೇಗ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಖಾಸಗಿ ಬಳಕೆಯ ಪ್ರಗತಿ ಇಳಿಕೆ, ನಿಗದಿತ ಹೂಡಿಕೆಯ ಏರಿಕೆ ಕುಂಠಿತವಾಗಿರುವುದು ಹಾಗೂ ರಫ್ತು ಸ್ಥಗಿತಗೊಂಡಿರುವುದು ಇದಕ್ಕೆ ಕಾರಣ" ಎಂದು ಹೇಳಿತ್ತು. ಈ ಬಿಕ್ಕಟ್ಟು ಆಳಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನುವುದು ರಾಯ್ ಅವರ ಸ್ಪಷ್ಟ ಅಭಿಪ್ರಾಯ.

"ನಾವು ರಾಚನಿಕ ನಿಧಾನಗತಿಯನ್ನು ಸಾಗುತ್ತಿದ್ದೇವೆ. ಇದು ಆರಂಭಿಕ ಎಚ್ಚರಿಕೆ. ಭಾರತದ ಆರ್ಥಿಕತೆ 1991ರಿಂದ ರಫ್ತು ಆಧಾರದಲ್ಲಿ ಪ್ರಗತಿಯಾಗುತ್ತಿಲ್ಲ... ಬದಲಾಗಿ ಅಗ್ರ 100 ದಶಲಕ್ಷ ಭಾರತೀಯ ಜನಸಂಖ್ಯೆ ಬಳಕೆಯನ್ನು ಹೆಚ್ಚಿಸಲು ಬಯಸಿರುವುದರಿಂದ ಪ್ರಗತಿಯಾಗುತ್ತಿದೆ" ಎಂದು ಪ್ರತಿಪಾದಿಸಿದ್ದಾರೆ. ಭಾರತದ ಪ್ರಗತಿಗೆ ಶಕ್ತಿ ತುಂಬಿರುವ ಈ 10 ಕೋಟಿ ಭಾರತೀಯರಿಂದ ಅಭಿವೃದ್ಧಿ ಸಾಧ್ಯತೆ ಇಳಿಮುಖವಾಗುತ್ತಿದೆ ಎಂದು ಹೇಳಿದ್ದಾರೆ.

"ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾವು ದಕ್ಷಿಣ ಕೊರಿಯಾದಂತಿಲ್ಲ. ಚೀನಾದಂತೆಯೂ ಇಲ್ಲ. ನಾವು ಬ್ರೆಝಿಲ್ ಅಥವಾ ದಕ್ಷಿಣ ಆಫ್ರಿಕಾ ಆಗುತ್ತೇವೆ. ನಾವು ಮಧ್ಯಮ ಆದಾಯದ ದೇಶವಾಗಲಿದ್ದು, ದೊಡ್ಡ ಸಂಖ್ಯೆಯ ಬಡವರು, ಹೆಚ್ಚುವ ಅಪರಾಧ ಹೊಂದಿರುವ ದೇಶವಾಗಿ ವಿಶ್ವದ ಇತಿಹಾಸದಲ್ಲಿರುತ್ತೇವೆ'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News