×
Ad

ಬಿಬಿಎಂಪಿ ಉಪಚುನಾವಣೆ ಅಧಿಸೂಚನೆ ಪ್ರಕಟ: ನಾಮಪತ್ರ ಸಲ್ಲಿಕೆ ಆರಂಭ

Update: 2019-05-09 20:23 IST

ಬೆಂಗಳೂರು, ಮೇ 9: ಅಕಾಲಿಕ ಮರಣದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರವುಗೊಂಡಿದ್ದ ಎರಡು ಪಾಲಿಕೆ ಸದಸ್ಯ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಗಾಯಪುರ, ಕಾವೇರಿಪುರ ವಾರ್ಡ್‌ಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.

ಉಪಮೇಯರ್ ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಕಾವೇರಿಪುರ ವಾರ್ಡ್‌ಗೆ (ಹಿಂದುಳಿದ ವರ್ಗ- ಎ ಮಹಿಳೆ) ಹಾಗೂ ಏಳುಮಲೈ ನಿಧನದಿಂದ ತೆರವಾಗಿರುವ ಸಗಾಯಪುರ ವಾರ್ಡ್‌ಗೆ (ಸಾಮಾನ್ಯ) ಮೀಸಲಿದೆ. ಸಗಾಯಿಪುರ ವಾರ್ಡ್‌ಗೆ ಎಂ.ಪಿ.ಕೃಷ್ಣಕುಮಾರ್ ಹಾಗೂ ಕಾವೇರಿಪುರ ವಾರ್ಡ್‌ಗೆ ರಾಜು ಅವರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಅನ್ವಯ ಎರಡೂ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಒಂದು ವಾರಕ್ಕೆ ಮೊದಲು ಮತದಾರರ ಮನೆಗಳಿಗೆ ಮತದಾನದ ಚೀಟಿ ಕಳುಹಿಸಲಾಗುವುದು. ಲೋಕಸಭಾ ಚುನಾವಣೆಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಿರುವುದರಿಂದ ಈ ಉಪಚುನಾವಣೆಯಲ್ಲಿ ಎಡಗೈನ ಉಂಗುರದ ಬೆರಳಿಗೆ ಶಾಯಿ ಹಾಕಲಾಗುವುದು. ಸಗಾಯಪುರ ವಾರ್ಡ್‌ನಲ್ಲಿ 31, ಕಾವೇರಿಪುರ ವಾರ್ಡ್‌ನಲ್ಲಿ 43 ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, 3 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 356 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಎಲ್ಲಿ ಮತ ಏಣಿಕೆ?: ಸಗಾಯಪುರ ವಾರ್ಡ್‌ನ ಮತ ಎಣಿಕೆ ಫ್ರೇಜರ್ ಟೌನ್‌ನಲ್ಲಿರುವ ಬಿಬಿಎಂಪಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕಾವೇರಿಪುರ ವಾರ್ಡ್‌ನ ಮತ ಎಣಿಕೆ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಸರ್ವೋದಯ ಶಾಲೆಯಲ್ಲಿ ಮೇ 31ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. 3 ಸುತ್ತು ಮತ ಎಣಿಕೆ ನಡೆಯಲಿದೆ. ಉಪ ಚುನಾವಣೆಗೆ ವಿವಿ ಪ್ಯಾಟ್ ಬಳಕೆ ಮಾಡುತ್ತಿಲ್ಲ. ಕೇವಲ ಇವಿಎಂ ಮಾತ್ರ ಬಳಕೆ ಮಾಡಲಾಗುವುದು ಎಂದು ವಿವರಿಸಿದರು.

ಎರಡು ವಾರ್ಡ್‌ಗಳಿಗೆ ನೀತಿ ಸಂಹಿತೆ

ಸಗಾಯಪುರ, ಕಾವೇರಿಪುರ ವಾರ್ಡ್‌ಗಳ ಉಪ ಚುನಾವಣೆ ಘೋಷಣೆಯಾಗಿದ್ದು, ಮೇ 31ರ ತನಕ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನಲೆ ಮೇ 27ರಂದು ನೀತಿ ಸಂಹಿತೆ ಪೂರ್ಣಗೊಳ್ಳಲಿದ್ದು, ಸಗಾಯಪುರ, ಕಾವೇರಿಪುರ ವಾರ್ಡ್‌ಗಳಿಗೆ ಮಾತ್ರ ಮೇ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಮಲ್ಲೇಶ್ವರದಲ್ಲಿರುವ ಐಟಿಪಿ ಸೆಂಟರ್‌ನಲ್ಲಿ ಮಾದರಿ ಮತ ಎಣಿಕಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ಇಲ್ಲಿ ಎಲ್ಲ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಮತ ಎಣಿಕೆ ಕುರಿತು ತರಬೇತಿ ನೀಡಲಾಗುವುದು.

-ಮಂಜುನಾಥ್ ಪ್ರಸಾದ್, ಜಿಲ್ಲಾ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News