ಪೂರ್ವಾಗ್ರಹಪೀಡಿತ ಸುಳ್ಳುಸುದ್ದಿ ಪ್ರಸಾರ: ಪಾಪ್ಯುಲರ್ ಫ್ರಂಟ್ ಖಂಡನೆ

Update: 2019-05-09 16:37 GMT

ಬೆಂಗಳೂರು, ಮೇ 9: ಬೀದಿ ಬದಿ ವ್ಯಾಪಾರಿಯೊಬ್ಬರ ವೇಷಭೂಷಣವನ್ನು ಕೇಂದ್ರೀಕರಿಸಿ ಸಿಸಿ ಕ್ಯಾಮರಾ ವೀಡಿಯೊವನ್ನು ಅಕ್ರಮವಾಗಿ ತಮ್ಮ ಟಿವಿ ಚಾನೆಲ್‌ನಲ್ಲಿ ಪ್ರಸಾರ ಮಾಡಿ ಭಯೋತ್ಪಾದಕನೆಂದು ಪಟ್ಟಕಟ್ಟಿ ಪೂರ್ವಾಗ್ರಹಪೀಡಿತ ಸುದ್ದಿಪ್ರಸಾರ ಮಾಡಿರುವ ಟಿವಿ ಚಾನೆಲ್‌ವೊಂದರ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷಾ ತೀವ್ರವಾಗಿ ಖಂಡಿಸಿದ್ದಾರೆ.

ಮಾತ್ರವಲ್ಲದೆ ಇಂತಹ ವೀಡಿಯೋವನ್ನು ಚಾನೆಲ್ ಗೆ ಸೋರಿಕೆ ಮಾಡಿರುವ ಮೆಟ್ರೋ ಸಿಬ್ಬಂದಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೊಳಪಡಿಸಬೇಕು ಎಂದು ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ವೃದ್ಧ ಮುಹಮ್ಮದ್ ರಿಯಾಝ್ ಎಂಬ ವ್ಯಕ್ತಿ ಸುಮಾರು 30 ವರ್ಷಗಳಿಂದ ನಗರದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದು ಪಾಲಿಕೆಯ ಅಧಿಕೃತ ಪರವಾನಿಗೆ ಹೊಂದಿರುವ ಚಿರಪರಿಚಿತ ವ್ಯಕ್ತಿಯಾಗಿರುತ್ತಾರೆ. ಮೆಟ್ರೋ ರೈಲು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚುವರಿಯಾಗಿ ನಡೆಸಿದ ತನಿಖೆಯ ದೃಶ್ಯಾವಳಿಗಳನ್ನು ಕಾನೂನುಬಾಹಿರವಾಗಿ ಟಿವಿ ಚಾನೆಲ್‌ಗೆ ಸೋರಿಕೆ ಮಾಡಿರುವುದು ಅಪರಾಧವಾಗಿರುತ್ತದೆ. ಟಿವಿ ಚಾನೆಲ್ ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ ರಿಯಾಝ್ ರವರ ವಿರುದ್ಧ ಮಾನಹಾನಿಕಾರಿಯಾಗಿ ಸುದ್ದಿ ಪ್ರಸಾರ ಮಾಡಿ ಶಂಕಿತ ಉಗ್ರ ಎಂದು ಘೋಷಿಸಿಬಿಟ್ಟಿತ್ತು. ವೃದ್ಧ ವ್ಯಾಪಾರಿಯ ಗಡ್ಡ ಮತ್ತು ಧರಿಸಿರುವ ಪೈಜಾಮನ್ನು ಉಲ್ಲೇಖಿಸುತ್ತಾ ಪೂರ್ವಾಗ್ರಹಪೀಡಿತ ಮತ್ತು ಸುಳ್ಳು ಮಾಹಿತಿಗಳನ್ನು ಟಿವಿ ಚಾನೆಲ್ ಪ್ರಸಾರ ಮಾಡಿತ್ತು. ಈ ರೀತಿಯ ಸುದ್ದಿ ಪ್ರಸಾರ ಮಾಡುವುದು ಕೇವಲ ಟಿ.ಆರ್.ಪಿ ಉದ್ದೇಶ ಮಾತ್ರವಾಗಿರದೆ, ಇವೆಲ್ಲವೂ ಪೂರ್ವಯೋಜಿತ ಷಡ್ಯಂತ್ರದ ಭಾಗವಾಗಿದೆ. ಇದು ವ್ಯಕ್ತಿ ಮತ್ತು ಒಂದು ನಿರ್ದಿಷ್ಟ ಸಮುದಾಯದ ಸಾರ್ವಜನಿಕ ಬದುಕಿನ ಮೇಲೆ ಭಾರೀ ಪ್ರತಿಕೂಲ ಬೀರುತ್ತದೆ.

ಇದೇ ರೀತಿ ಈ ಹಿಂದೆ ನಟಿ ರಮ್ಯಾ ವಿರುದ್ಧ ಮಾನಹಾನಿಕರ ಸುಳ್ಳುಸುದ್ದಿ ಪ್ರಸಾರ ಮಾಡಿದ್ದ ಟಿವಿ ಚಾನೆಲ್ ಗೆ 50 ಲಕ್ಷ ರೂಪಾಯಿ ದಂಡ ವಿಧಿಸಿರುವ ತೀರ್ಪು ಸ್ವಾಗತಾರ್ಹವಾಗಿದೆ. ಮಾಧ್ಯಮಗಳು ನಾಡಿನ ಶಾಂತಿಸುವ್ಯವಸ್ಥೆ ಕಾಪಾಡುವ ಮತ್ತು ಬಹುಸಂಸ್ಕೃತಿಗಳ ನಡುವೆ ನಂಬಿಕೆ, ವಿಶ್ವಾಸ ಮೂಡಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕೇ ಹೊರತು ಬಹುತ್ವವನ್ನು ಒಡೆಯುವ ಕೆಲಸ ಮಾಡಬಾರದು ಎಂದು ನಾಸಿರ್ ಪಾಷಾ ಪತ್ರಿಕಾ ಹೇಳಿಕೆಯಲ್ಲಿ ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News