ಜಾಧವ್ ಸ್ವಯಂಕೃತ ಅಪರಾಧದಿಂದ ಚಿಂಚೋಳಿ ಉಪ ಚುನಾವಣೆ: ಎಂ.ಬಿ.ಪಾಟೀಲ್

Update: 2019-05-09 16:24 GMT

ಬೆಂಗಳೂರು, ಮೇ 9: ಕುಂದಗೋಳದಲ್ಲಿ ಸಿ.ಎಸ್.ಶಿವಳ್ಳಿ ಅಕಾಲಿಕ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ಆದರೆ, ಚಿಂಚೋಳಿಯಲ್ಲಿ ಜಾಧವ್ ಸ್ವಯಂಕೃತ ಅಪರಾಧದಿಂದ ಉಪ ಚುನಾವಣೆ ಬಂದಿದ್ದು, ಅವರ ಸೋಲು ನಿಶ್ಚಿತ. ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ಕುಂದಗೊಳ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಸತೀಶ್ ಜಾರಕಿಹೋಳಿ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಚಿಂಚೋಳಿ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್, ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ, ಪ್ರಿಯಾಂಕ್ ಖರ್ಗೆ ಹಾಗೂ ತಾನು ಪ್ರಚಾರ ನಡೆಸಲಿದ್ದೇವೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ ಮಾದರಿಯಲ್ಲೇ ಒಗ್ಗಟ್ಟಿನಿಂದಲೇ ಕೆಲಸ ಮಾಡುತ್ತೇವೆ ಎಂದರು.

ಜಾಧವ್, ಖರ್ಗೆ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡಿ ಪಕ್ಷ ತೊರೆದರು. ಆದರೆ, ಇದೀಗ ಜಾಧವ್ ತನ್ನ ಪುತ್ರನಿಗೆ ಟಿಕೆಟ್ ಕೊಡಿಸಿದ್ದು, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದನ್ನು ಕ್ಷೇತ್ರದ ಜನತೆ ತೀರ್ಮಾನ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಮುಖ್ಯಸ್ಥರಿಗೆ ಪತ್ರ: ಉಡುಪಿಯ ಮಲ್ಪೆ ಬಂದರಿನಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ದೋಣಿ ಅವಶೇಷಗಳು ಪತ್ತೆಯಾಗಿದ್ದು, ಇನ್ನೂ ಮೀನುಗಾರರ ಸುಳಿವು ಸಿಕ್ಕಿಲ್ಲ. ನೌಕಾಪಡೆ ಹಡಗು ಢಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಎರಡು ದಿನಗಳಲ್ಲಿ ನೌಕಾಪಡೆ ಮುಖ್ಯಸ್ಥರಿಗೆ ಪತ್ರ ಬರೆದು ಸ್ಪಷ್ಟಣೆ ಕೋರಲಾಗುವುದು. ಅಲ್ಲದೆ, ಘಟನೆಗೆ ನೌಕಾ ಪಡೆ ಸೂಕ್ತ ಕಾರಣ ನೀಡಬೇಕಾಗುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇದೇ ಸಂದರ್ಭದಲ್ಲಿ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News