ಹೊಳೆಯುವ ಚರ್ಮ ನಿಮ್ಮದಾಗಬೇಕೇ?: ಈ ಆಹಾರಗಳನ್ನು ಸೇವಿಸಿ

Update: 2019-05-10 07:10 GMT

ಸುಂದರ ಮತ್ತು ಹೊಳೆಯುವ ಚರ್ಮ ನಾವೇನು ಸೇವಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ, ಆದರೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ನೆರವಾಗುವ ಕೆಲವು ಆಹಾರಗಳಿವೆ. ನಮ್ಮ ಆಹಾರವು ಉತ್ಕರ್ಷಣ ನಿರೋಧಕಗಳು,ಆರೋಗ್ಯಕರ ಕೊಬ್ಬುಗಳು,ನೀರಿನಂಶ ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ಖಂಡಿತವಾಗಿಯೂ ನಮ್ಮ ಶರೀರವು ಅದಕ್ಕೆ ಸ್ಪಂದಿಸುತ್ತದೆ ಮತ್ತು ಸುಂದರ,ಹೊಳೆಯುವ ಚರ್ಮದ ಮೂಲಕ ಬದಲಾವಣೆಗಳು ಕಂಂಡು ಬರುತ್ತವೆ.

 ಹೀಗಾಗಿ ಹಲವಾರು ರಾಸಾಯನಿಕಗಳನ್ನು ಒಳಗೊಂಡಿರುವ ಸ್ಕಿನ್ ಲೋಷನ್‌ಗಳು ಮತ್ತು ಸೌಂದರ್ಯ ಸಾಧನಗಳನ್ನು ಆಚೆಗಿಡಿ ಮತ್ತು ನಿಮ್ಮ ಚರ್ಮದ ಪೋಷಣೆಗಾಗಿ ವಯಸ್ಸಾಗುವುದನ್ನು ತಡೆಯುವ ಈ ಆಹಾರಗಳನ್ನು ಸೇವಿಸಿ ನೋಡಿ....

ಕೆಂಪು ದೊಣ್ಣೆಮೆಣಸು

ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದ್ದು,ವಯಸ್ಸಾಗುವುದನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಕೊಲಾಜೆನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೊಲಾಜೆನ್ ಸ್ವಚ್ಛ ಚರ್ಮಕ್ಕೆ ಕಾರಣವಾಗುತ್ತದೆ.

ಪಪ್ಪಾಯಿ

ಈ ಸ್ವಾದಿಷ್ಟ ಹಣ್ಣು ವಿವಿಧ ಉತ್ಕರ್ಷಣ ನಿರೋಧಕಗಳು,ವಿಟಾಮಿನ್‌ಗಳು ಮತ್ತು ಖನಿಜಗಳನ್ನು ವಿಫುಲವಾಗಿ ಒಳಗೊಂಡಿದೆ. ಇವು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಉತ್ತಮಗೊಳಿಸುತ್ತವೆ ಮತ್ತು ಚರ್ಮದಲ್ಲಿ ಗೆರೆಗಳು ಮತ್ತು ಸುಕ್ಕುಗಳ ಕಾಣಿಸುವಿಕೆಯನ್ನು ಕನಿಷ್ಠಗೊಳಿಸುತ್ತವೆ.

ಬ್ಲೂ ಬೆರ್ರಿ

ಬ್ಲೂ ಬೆರ್ರಿಗಳು ಸಮೃದ್ಧ ವಿಟಾಮಿನ್‌ಎ ಮತ್ತು ಸಿ ಜೊತೆಗೆ ವಯಸ್ಸಾಗುವುದನ್ನು ವಿಳಂಬಿಸುವ ಆ್ಯಂಥೊಸಿಯಾನಿನ್ ಎಂಬ ಉತ್ಕರ್ಷಣ ನಿರೋಧಕವನ್ನೂ ಒಳಗೊಂಡಿವೆ. ಈ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಬಿಸಿಲು,ಒತ್ತಡ ಮತ್ತು ವಾಯುಮಾಲಿನ್ಯದಿಂದ ಉಂಟಾಗುವ ಹಾನಿಯ ವಿರುದ್ಧ ಚರ್ಮಕ್ಕೆ ರಕ್ಷಣೆ ನೀಡುತ್ತವೆ.

ಪಾಲಕ್

ಶರೀರದ ನಿರ್ಜಲೀಕರಣದ ವಿರುದ್ಧ ಅತ್ಯುತ್ತಮ ರಕ್ಷಣೆಯನ್ನು ನೀಡುವ ಪಾಲಕ್ ವಿಟಾಮಿನ್ ಸಿ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇದು ಚರ್ಮವನ್ನು ದೃಢ ಮತ್ತು ಮೃದುವಾಗಿರಿಸಲು ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಎ ತಲೆಗೂದಲನ್ನು ಬಲಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ.

ಅವೊಕಾಡೊ

ಅವೊಕಾಡೊದಲ್ಲಿ ಉರಿಯೂತದ ವಿರುದ್ಧ ಹೋರಾಡುವ ಫ್ಯಾಟಿ ಆ್ಯಸಿಡ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಚರ್ಮವನ್ನು ನಯ ಮತ್ತು ಮೃದುವಾಗಿಸುತ್ತವೆ. ಇದರಲ್ಲಿ ವಿವಿಧ ಅಗತ್ಯ ಪೋಷಕಾಂಶಗಳೂ ಇದ್ದು, ಅವು ವಯಸ್ಸಾಗುವಿಕೆಯ ನಕಾರಾತ್ಮಕ ಪರಿಣಾಮಗಳನ್ನು ತಡೆಯುತ್ತವೆ.

ಸುಂದರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಬೇಕು. ಇವು ನಿಮ್ಮ ಚರ್ಮವನ್ನು ಪುನಃಶ್ಚೇತನಗೊಳಿಸುವುದು ಮಾತ್ರವಲ್ಲ,ಇವುಗಳಲ್ಲಿರುವ ಇತರ ಪೋಷಕಾಂಶಗಳು ನಿಮ್ಮ ಯೌವನವನ್ನು ಕಾಯ್ದುಕೊಳ್ಳುವ ಜೊತೆಗೆ ಸದಾ ಕ್ರಿಯಾಶೀಲ ಮತ್ತು ಆರೋಗ್ಯಯುತರನ್ನಾಗಿರಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News