ಸಿಎಂ ರೆಸಾರ್ಟ್ ವಾಸ್ತವ್ಯಕ್ಕೆ ಬಿಜೆಪಿ ಆಕ್ಷೇಪ

Update: 2019-05-09 16:31 GMT

ಬೆಂಗಳೂರು, ಮೇ 9: ಇತ್ತೀಚೆಗೆ ಪ್ರಕೃತಿ ಚಿಕಿತ್ಸೆಗಾಗಿ ರೆಸಾರ್ಟ್‌ಗೆ ತೆರಳಿ, ಹಿಂದಿರುಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮೇ 11ರಿಂದ ಮತ್ತೆ ಎರಡು ದಿನಗಳ ರೆಸಾರ್ಟ್ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ‘ಭೀಕರ ಬರ ಆವರಿಸಿರುವ ಸಂದರ್ಭದಲ್ಲಿ ರೆಸಾರ್ಟ್ ವಾಸ್ತವ್ಯ ಸಲ್ಲ’ ಎಂದು ಬಿಜೆಪಿ ಆಕ್ಷೇಪಿಸಿದೆ.

ಮೇ 11 ಮತ್ತು 12ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿನ ಇಬ್ಬನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಅವರ ವಾಸ್ತವ್ಯಕ್ಕೆ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.

ಕೆಲ ದಿನಗಳ ಹಿಂದೆಯೆಷ್ಟೇ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ತಮ್ಮ ಪುತ್ರನ ಜೊತೆ ವಿಶ್ರಾಂತಿ ಪಡೆದಿದ್ದ ರೆಸಾರ್ಟ್‌ನಲ್ಲೆ ಕುಮಾರಸ್ವಾಮಿ ಕುಟುಂಬದ ಜತೆ ವಾಸ್ತವ್ಯ ಮಾಡಲಿದ್ದಾರೆಂದು ಹೇಳಲಾಗಿದೆ.

‘ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದ್ದು, ಜನತೆ ಕುಡಿಯುವ ನೀರು, ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಸರಿಯಲ್ಲ’ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News