ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ: ಕ್ಲೀನ್ ಚಿಟ್ ವಿರೋಧಿಸಿ ವಿವಿಧ ಸಂಘಟನೆಗಳಿಂದ ಧರಣಿ

Update: 2019-05-09 16:42 GMT

ಬೆಂಗಳೂರು, ಮೇ 9: ಸುಪ್ರೀ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪರಿಶೀಲನಾ ಸಮಿತಿಯ ಕ್ಲೀನ್ ಚಿಟ್ ಅನ್ಯಾಯವಾದುದು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಧರಣಿ ನಡೆಸಿದವು.

ಗುರುವಾರ ನಗರದ ಮೈಸೂರು ಬ್ಯಾಂಕ್ ಬಳಿ ಧರಣಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್ ಶ್ರೀನಿವಾಸ್, ಹಿಂದೆಂದೂ ಕಾಣದಂತಹ ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯು ಗಂಭೀರ ಬಿಕ್ಕಟ್ಟಿನಲ್ಲಿದೆ. ಮುಖ್ಯ ನ್ಯಾಯಾಧೀಶರ ವಿರುದ್ಧ ಮಾಡಲಾದ ಲೈಂಗಿಕ ಕಿರುಕುಳ ದೂರನ್ನು ಡೀಲ್ ಮಾಡುವಲ್ಲಿ ನ್ಯಾಯಾಲಯವು ದೂರುದಾರರ ದೂರನ್ನು ಸರಿಯಾದ ರೀತಿ ಆಲಿಸುವಲ್ಲಿ ವಿಫಲವಾಗಿದೆ. ಅಲ್ಲದೆ, ದೂರುದಾರಳ ಬೇಡಿಕೆಯಾದ ವಿಶೇಷ ವಿಚಾರಣಾ ಸಮಿತಿಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಸ್ವತಂತ್ರ ಮತ್ತು ನ್ಯಾಯಸಮ್ಮತ ವಿಚಾರಣೆಯ ನೀತಿ ನಿಯಮಗಳನ್ನು ಪಾಲಿಸದೇ ನೀಡಿದ ಈ ತೀರ್ಮಾನವನ್ನು ತಿರಸ್ಕರಿಸುತ್ತೇವೆ. ಈ ಪ್ರಕರಣದಲ್ಲಿ ಪಾಲಿಸಲಾದ ಪ್ರಕ್ರಿಯೆಯಲ್ಲಿ ಬರೀ ಸ್ವಾಭಾವಿಕ ನ್ಯಾಯದ ತತ್ವಗಳು ಮಾತ್ರ ಉಲ್ಲಂಘನೆಯಾಗದೇ ವಿಶಾಖ ಜಡ್ಜ್‌ಮೆಂಟ್‌ನ ಚೈತನ್ಯ ಮತ್ತು ಅದರಿಂದ ರೂಪಿಸಲಾದ ನೀತಿಗಳ ಉಲ್ಲಂಘನೆಯಾಗಿದೆ ಎಂದು ವಿಷಾದಿಸಿದರು.

ನಾವೆಲ್ಲರೂ ನ್ಯಾಯಾಂಗದ ಸ್ವತಂತ್ರ ಮತ್ತು ಸ್ವಾಯತ್ತತೆಯ ಪರವಾಗಿದ್ದು, ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಗೌರವಿಸುತ್ತೇವೆ. ಆದರೆ, ನಾವು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ತೋರಿಸುವುದರಲ್ಲಿಯೂ ನಂಬಿಕೆ ಇಟ್ಟಿದ್ದೇವೆ. ಅದರಿಂದ ಲೋಪದೋಷಗಳನ್ನು ತಿದ್ದುಕೊಳ್ಳಲು ಸಹಾಯವಾಗುತ್ತದೆಯೇ ಹೊರತು ಅದರ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇಡಿಕೆ: ಸುಪ್ರೀಂ ಕೋರ್ಟ್ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಪುನಃ ಗಟ್ಟಿಗೊಳಿಸಬೇಕು. ಜಸ್ಟೀಸ್ ಬಾಬ್ಡೆ ಪ್ಯಾನಲ್ ವರದಿಯ ಪ್ರತಿಯೊಂದನ್ನು ದೂರು ದಾರರಿಗೆ ನೀಡಬೇಕು. ದೂರುದಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಹಾಗೂ ರಚಿಸಬೇಕಿರುವ ಹೊಸ ಸಮಿತಿಗೆ ದಲತ ಸಮುದಾಯಕ್ಕೆ ಸೇರಿದ ಒಬ್ಬರಾದರೂ ನ್ಯಾಯಾಂಗ (ವಕೀಲರು/ನ್ಯಾಯಾಧೀಶರು/ನಿವೃತ್ತ ನ್ಯಾಯಾಧೀಶರು) ವ್ಯಕ್ತಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News