ರಾಜ್ಯ ಮಕ್ಕಳ ಲಿಂಗಾನುಪಾತ ಜನಗಣತಿಯಲ್ಲಿ ಏರಿಕೆ

Update: 2019-05-09 16:46 GMT

ಬೆಂಗಳೂರು, ಮೇ 9: ಕರ್ನಾಟಕದಲ್ಲಿ 6 ವರ್ಷಗಳವರೆಗಿನ ಮಕ್ಕಳ ಲಿಂಗಾನುಪಾತವು 2001ರ ಜನಗಣತಿಯಲ್ಲಿ 946 ಇದ್ದು, 2011ರ ಜನಗಣತಿಯಲ್ಲಿ 948ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಭಾರತದ ಮಹಾ ನೋಂದಣಾಧಿಕಾರಿಗಳು ಪ್ರಕಟಿಸಿರುವ 2016ರ ವರದಿಯನ್ವಯ, ಜನನ ಸಂದರ್ಭದಲ್ಲಿನ ರಾಷ್ಟ್ರದ ಲಿಂಗಾನುಪಾತ 877, ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡಿನಲ್ಲಿ 840, ತೆಲಂಗಾಣದಲ್ಲಿ 881 ಮತ್ತು ಕರ್ನಾಟಕದಲ್ಲಿ 896 ಎಂದು ವರದಿಯಾಗಿದೆ. ಆದರೆ, ರಾಜ್ಯದಲ್ಲಿ 2017ರ ವರ್ಷದಲ್ಲಾದ ಜನನಗಳಲ್ಲಿ 1 ಸಾವಿರ ಗಂಡು ಸಂತತಿಗೆ ಎದುರಾಗಿ 927 ಹೆಣ್ಣು ಸಂತತಿಯಾಗಿದ್ದು, ಇದರನ್ವಯ ಜನನ ಸಂದರ್ಭದಲ್ಲಿ ಲಿಂಗಾನುಪಾತ ಹೆಚ್ಚಾಗಿರುವುದು ಕಂಡು ಬಂದಿದೆ.

ರಾಜ್ಯದಲ್ಲಿ ಲಿಂಗಾನುಪಾತ ಏರುಪೇರಾಗಲು ಹೆಣ್ಣು ಭ್ರೂಣ ಪತ್ತೆಯನ್ನು ಕಾನೂನು ಬಾಹಿರವಾಗಿ ಮಾಡಿ ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ತಡೆಯಲು ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುವಂತಹ ಆಸ್ಪತ್ರೆ ಮತ್ತು ವೈದ್ಯರುಗಳು, ವೈದ್ಯಕೀಯ ಸಿಬ್ಬಂದಿಗಳ ಹಾಗೂ ಖಾಸಗಿ ವೈದ್ಯರುಗಳು, ಸ್ಕಾನ್ ಸೆಂಟರ್‌ಗಳ ಮತ್ತು ಕ್ಲಿನಿಕ್ ಸೆಂಟರ್‌ಗಳ ಮೇಲೆ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಹೆಣ್ಣು ಭ್ರೂಣ ಲಿಂಗ ಪತ್ತೆ ತಡೆಯುವ ಕಾಯ್ದೆಯನ್ವಯ ಪ್ರಕರಣಗಳನ್ನು ದಾಖಲಿಸಲು ಹಾಗೂ ಈ ರೀತಿ ಪತ್ತೆ ಮಾಡಿಸುವಂತಹ ಸಾರ್ವಜನಿಕರ ಮೇಲೆಯೂ ಸಹ ನಿಗಾವಹಿಸಲು ಸೂಚಿಸಿ, ಪೊಲೀಸ್ ಇಲಾಖೆಯಿಂದ ಜ್ಞಾಪನದ ಮೂಲಕ ರಾಜ್ಯದ ಎಲ್ಲ ಘಟಕಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018: ಪ್ರತಿ ಹೆಣ್ಣು ಮಗುವಿನ ಜೀವಿಸುವ, ಅಭಿವೃದ್ಧಿ ಹೊಂದುವ, ಸುರಕ್ಷಿತವಾಗಿ ಬದುಕುವ, ಸಹಭಾಗಿತ್ವದ ಹಾಗೂ ಪಾಲುದಾರಿಕೆಯ ಹಕ್ಕನ್ನು ಬಾಲ್ಯಾವಸ್ಥೆಯಲ್ಲಿ ಸಂರಕ್ಷಿಸಿ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಅನ್ನು ಜಾರಿಗೆ ತಂದಿದೆ. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News