ಗಾಂಜಾ ಮಾರಾಟ: ಆರೋಪಿ ಬಂಧನ

Update: 2019-05-09 16:48 GMT

ಬೆಂಗಳೂರು, ಮೇ 9: ಪೀಣ್ಯದ ಆಶ್ರಯನಗರದ ಮನೆಯೊಂದರ ಬಳಿ ಗಾಂಜಾ ಶೇಖರಿಸಿ, ಮಾರಾಟ ಮಾಡುತ್ತಿದ್ದ ಒರ್ವ ವ್ಯಕ್ತಿಯನ್ನು ಆರ್.ಎಂ.ಸಿ.ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಇಲ್ಲಿನ ನಿವಾಸಿ ತೇಜಸ್(21) ಬಂಧಿತ ಆರೋಪಿಯಾಗಿದ್ದು, ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಬಂಧಿತನಿಂದ 1 ಕೆಜಿ ಗಾಂಜಾ, 10 ಗಾಂಜಾ ಪ್ಯಾಕೆಟ್, 900 ರೂ. ನಗದು ಮತ್ತು 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತೇಜಸ್ ಜತೆ ವಾಸು, ಅಲೀಮ್, ಚಾಂದಪಾಷಾ ಹಾಗೂ ಆರೀಫ್ ಖಾನ್ ಎಂಬುವವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರೆಮಾಚಿಕೊಂಡಿರುವ ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.

ಆರೋಪಿಯು ಉಲ್ಲಾಳ ಉಪನಗರದ ನಿವಾಸಿ ಆರೀಫ್ ಖಾನ್ ಎಂಬಾತನಿಂದ ಗಾಂಜಾ ಖರೀದಿಸುತ್ತಿದ್ದ. ಪೀಣ್ಯ ಎಸ್.ಆರ್.ಎಸ್ ಹಿಂಭಾಗದ ಆಶ್ರಯನಗರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಕೊಂಡಿದ್ದ. ತಲೆಮರೆಸಿಕೊಂಡಿರುವ ಆರೋಪಿಗಳಾದ ವಾಸು, ಅಲೀಮ್ ಮತ್ತು ಚಾಂದಪಾಷಾ ಜೊತೆಗೂಡಿ ಗಾಂಜಾ ಮಾರಾಟಕ್ಕೆ ಸಣ್ಣ ಪ್ಯಾಕೆಟ್‌ಗಳನ್ನು ತಯಾರಿಸುತ್ತಿದ್ದರು. ಪರಿಚಿತ ವ್ಯಕ್ತಿಗಳಿಗೆ 300 ರೂ.ಗೆ ಒಂದು ಪ್ಯಾಕೆಟ್ ಗಾಂಜಾ ಮಾರಾಟ ಮಾಡುತ್ತಿದ್ದ. ಮಾರಾಟದಿಂದ ಬಂದ ಹಣವನ್ನು ನಾಲ್ವರು ಸಮವಾಗಿ ಹಂಚಿಕೊಳ್ಳುತ್ತಿದ್ದರು ಎಂಬುದು ಬಂಧಿತ ಆರೋಪಿ ವಿಚಾರಣೆಯಲ್ಲಿ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News