ನಿವೃತ್ತ ಐಎಎಸ್ ಅಧಿಕಾರಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
ಬೆಂಗಳೂರು, ಮೇ 9: ಗೋಕುಲ ಶಿಕ್ಷಣ ಪ್ರತಿಷ್ಠಾನ ಮತ್ತು ರಾಮಯ್ಯ ಆಫೀಸರ್ಸ್ ಐಎಎಸ್ ಅಕಾಡಮಿ ಸಹಯೋಗದೊಂದಿಗೆ ಜೂ.1 ರಿಂದ ಎರಡು ವರ್ಷಗಳವರೆಗೆ ನಾಗರಿಕ ಸೇವಾ ತರಬೇತಿಯನ್ನು ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಜಿ.ಎಸ್.ಹೆಗ್ಡೆ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ನಾಗರಿಕ ಅಧಿಕಾರಿಗಳನ್ನು ದೇಶಕ್ಕೆ ನೀಡಬೇಕೆಂಬ ಉದ್ದೇಶದಿಂದ ಇಸ್ರೇಲ್ ಜಬಸಿಂಗ್ ಮತ್ತು ರಂಗರಾಜನ್‌ರವರು ತರಬೇತಿ ಕೇಂದ್ರವನ್ನು ಶುರುಮಾಡಿದರು. ನಿವೃತ್ತ ಸಿವಿಲ್ ಸರ್ವಿಸ್ ಅಧಿಕಾರಿಗಳಿಂದ ತರಬೇತಿ ನೀಡುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ. 2018ರ ಸಾಲಿನ ಲೋಕಸೇವಾ ಆಯೋಗದ ಕೇಂದ್ರ ನಡೆಸಿದ ಪರೀಕ್ಷೆಯಲ್ಲಿ ಈ ಕೇಂದ್ರದಲ್ಲಿ ತರಬೇತಿ ಪಡೆದ 102 ವಿದ್ಯಾರ್ಥಿಗಳು ವಿವಿಧ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತರಬೇತಿ ಜೊತೆಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿ, ನಿವೃತ್ತ ಕಾರ್ಯದರ್ಶಿಗಳು, ಪೊಲೀಸ್ ಮಹಾ ನಿರ್ದೇಶಕರುಗಳಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ಆಸಕ್ತರು, ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೇ 19 ರಂದು ನಡೆಯಲಿರುವ ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಬಹುದು. ಪ್ರವೇಶ ಪರೀಕ್ಷೆಯು ಮಾತ್ರ ಉಚಿತವಾಗಿರುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಜೂನ್‌ನಿಂದ ನಿವೃತ್ತ ಅಧಿಕಾರಿಗಳಿಂದ ತರಬೇತಿ ನಡೆಸಲಾಗುವುದು. ಒಬ್ಬ ವಿದ್ಯಾರ್ಥಿಗೆ ಎರಡು ವರ್ಷ ಅವಧಿ ಎಂದು ತಿಳಿಸಿದರು.
ತರಬೇತಿ ಕೇಂದ್ರವು ಆಧುನಿಕ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 98802 44222 ಅನ್ನು ಸಂಪರ್ಕಿಸಬಹುದು ಎಂದರು.