×
Ad

ಸರಕಾರದ ಮಾನಸಿಕ ಭ್ರಷ್ಟತೆಯಿಂದ ಇಂಗ್ಲಿಷ್ ಮಾಧ್ಯಮ: ಪ್ರೊ.ಹಿ.ಚಿ.ಬೋರಲಿಂಗಯ್ಯ

Update: 2019-05-10 22:39 IST

ಬೆಂಗಳೂರು, ಮೇ 10: ನಾಡಿನ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಯಾಗಲು ರಾಜ್ಯ ಸರಕಾರದ ಮಾನಸಿಕ ಭ್ರಷ್ಟತೆಯೇ ಕಾರಣ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಟೀಕಿಸಿದರು.

ಶುಕ್ರವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಥಾಪನ ದಿನಾಚರಣೆ ಹಾಗೂ ವಿಜಯ ವೈಜಯಂತಿ ಪುರಸ್ಕೃತ ಮತ್ತು ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂಗ್ಲಿಷ್ ಮೇಲಿನ ವ್ಯಾಮೋಹ ಎಷ್ಟರ ಮಟ್ಟಿಗೆ ಇದೆ ಎಂದರೆ, ರಾಜ್ಯ ಸರಕಾರವೇ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಇಂಗ್ಲಿಷ್ ಭಾಷೆ ಜಾರಿಗೆ ತಂದಿದೆ. ಇದು ಮಾನಸಿಕ ಭ್ರಷ್ಟತೆ ಇದ್ದ ಹಾಗೆ. ಅಲ್ಲದೆ, ಇಂಗ್ಲಿಷ್ ಭಾಷೆ ಬಳಕೆಯಿಂದ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ನಾಶ ಆಗಲಿವೆ. ಈ ಬಗ್ಗೆ ನಮ್ಮ ಮೂರ್ಖ ರಾಜಕಾರಣಿಗಳಿಗೆ ಅರಿವು ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.

ಸಂಸ್ಕೃತ ಭಾಷೆ ಓದುವ, ಬರೆಯುವ ಅವಕಾಶ ಒಂದು ವರ್ಗಕ್ಕೆ ಸೀಮಿತವಾಗಿದ್ದ ಕಾರಣ, ಜನ-ಸಂಪರ್ಕ ಭಾಷೆಯಾಗಲು ಸಾಧ್ಯವಾಗಿಲ್ಲ ಎಂದ ಅವರು, ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವೇಳೆ, ಅನೇಕರು ವಿರೋಧ ವ್ಯಕ್ತಪಡಿಸಿದರು. ಆದರೆ, ಈ ಭಾಷೆ ಜ್ಞಾನ ಭಂಡಾರ ಎಂಬುವುದು ಎಲ್ಲರಿಗೂ ನಿಧಾನವಾಗಿ ತಿಳಿಯಿತು ಎಂದು ನುಡಿದರು.

ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪ್ರೊ.ವಿ.ಮುರಳೀಧರ ಶರ್ಮಾ ಮಾತನಾಡಿ, ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಗಳಲ್ಲಿ ಒಂದಾದ ಗುರುಕುಲ ಪದ್ಧತಿಗೆ ಪುನರುಜ್ಜೀವನ ನೀಡಬೇಕು. ಇದಕ್ಕಾಗಿ, ಅಗತ್ಯ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಚೀನ ಭಾರತ ಇತಿಹಾಸದ ಪುಟಗಳನ್ನು ನೋಡಿದಾಗ, ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು, ವಿದೇಶಿಗರು ಬಂದಿದ್ದಾರೆ. ಆದರೆ, ಈಗ ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಭಾರತದ ಹೆಸರೇ ಇಲ್ಲ. ಇದನ್ನು ಸರಿ ಮಾಡಲು ನಾವು ಬಹಳ ಪ್ರಯತ್ನ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪದ್ಮಾಶೇಖರ್‌ವಹಿಸಿದ್ದರು. ಕುಲಸಚಿವೆ ಎಂ.ಶಿಲ್ಪಾ, ವಿವಿಯ ಹಣಕಾಸು ಅಧಿಕಾರಿ ಡಾ.ಪ್ರಕಾಶ ಆರ್. ಪಾಗೋಜಿ ಸೇರಿದಂತೆ ಪ್ರಮುಖರಿದ್ದರು.

‘ಮನು ಹೇಳಿದ್ದು ಬೇಕಿಲ್ಲ’

 ಮನು ಹೇಳಿದಿರುವುದನ್ನೆಲ್ಲ ಈಗ ಮಾಡಬೇಕು ಎನ್ನುವುದು ಸರಿಯಲ್ಲ. ಅದೇ ರೀತಿ, ಮನು ಹೇಳಿದ್ದಾನೆ ಎಂಬ ಕಾರಣಕ್ಕೆ ಸಂಸ್ಕೃತ ಭಾಷೆಯನ್ನು ವಿರೋಧಿಸುವುದು ಸಹ ಸೂಕ್ತವಲ್ಲ.

-ಪ್ರೊ.ಹಿ.ಚಿ.ಬೋರಲಿಂಗಯ್ಯ, ವಿಶ್ರಾಂತ ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News