ಬಮೂಲ್ ನಿರ್ದೇಶಕ ಸ್ಥಾನಗಳಿಗೆ ಮೇ 12ಕ್ಕೆ ಚುನಾವಣೆ

Update: 2019-05-10 17:11 GMT

ಬೆಂಗಳೂರು, ಮೇ 10: ಬೆಂಗಳೂರು ಹಾಲು ಮಹಾಮಂಡಳಿ(ಬಮೂಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಮೇ 12ರಂದು ಚುನಾವಣೆ ನಡೆಯಲಿದ್ದು, ಗೆಲುವಿಗಾಗಿ ಭರ್ಜರಿ ಪೈಪೊಟಿ ನಡೆಯುತ್ತಿದೆ.

ಬಮೂಲ್‌ನಲ್ಲಿ 12 ನಿರ್ದೇಶಕ ಸ್ಥಾನಗಳಿದ್ದವು. ಆದರೆ, ಇತ್ತೀಚಿಗೆ ಹೊಸದಾಗಿ ಕುದೂರು ಕ್ಷೇತ್ರ ಸೃಷ್ಟಿಸಿರುವುದರಿಂದ ಒಟ್ಟು 13 ನಿರ್ದೇಶಕ ಸ್ಥಾನಗಳಿದ್ದು, ಅದರಲ್ಲಿ ಈಗಾಗಲೇ ಕನಕಪುರದಿಂದ ರಾಜಕುಮಾರ್ ಹಾಗೂ ಆನೇಕಲ್‌ನಿಂದ ಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಉಳಿದಿರುವ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಿರ್ದೇಶಕರಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ.

15.50 ಲಕ್ಷ ಲೀಟರ್ ಹಾಲು: ಬಮೂಲ್‌ಗೆ ಬರುತ್ತಿರುವ ಹಾಲಿನ ಪ್ರಮಾಣ 15.50 ಲಕ್ಷ ಲೀಟರ್‌ಗೆ ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ದಿನದ ಸಂಗ್ರಹ 18 ಲಕ್ಷ ಲೀಟರ್‌ಗೆ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಬಮೂಲ್‌ನಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 25 ರೂ. ಮತ್ತು ಸರಕಾರದ ಪ್ರೋತ್ಸಾಹಧನ 5 ರೂ. ಸೇರಿ ಪ್ರತಿ ಲೀಟರ್‌ಗೆ 30 ರೂ. ನೀಡಲಾಗುತ್ತಿದೆ.

ಕೆಎಂಎಫ್ ಮೂಲಕ ಮಾರಾಟ: ಹಾಲು ಉತ್ಪನ್ನಗಳಾದ ಬೆಣ್ಣೆ, ಹಾಲಿನ ಪುಡಿ ಸೇರಿ ಹಲವು ಉತ್ಪನ್ನಗಳನ್ನು ಬಮೂಲ್ ಮೂಲಕವೇ ಮಾರುಕಟ್ಟೆ ಮಾಡುವ ಪ್ರಯತ್ನ ಕೈ ಬಿಡಲಾಗಿದೆ. ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಕೆಎಂಎಫ್ ಮೂಲಕವೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News