ಶೇ.15 ರಷ್ಟು ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಸಿದ್ಧತೆ

Update: 2019-05-10 17:13 GMT

ಬೆಂಗಳೂರು, ಮೇ 10: ನಗರದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿಗಾಗಿ ಪರಿತಪಿಸುತ್ತಿರುವ ಸಂದರ್ಭದಲ್ಲಿ ಜಲಮಂಡಳಿಯಿಂದ ಕಾವೇರಿ ನೀರಿನ ದರ ಶೇ.15 ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸಿದೆ.

ಜಲಮಂಡಳಿಯು ಐದು ವರ್ಷಗಳ ಬಳಿಕ ನೀರಿನ ದರವನ್ನು ಪರಿಷ್ಕರಣೆ ಮಾಡಿದ್ದು, ಸದ್ಯದಲ್ಲಿಯೇ ದರಗಳು ಏರಿಕೆಯಾಗಲಿವೆ. ನೀರಿನ ದರ ಏರಿಕೆ ಸಂಬಂಧ ಜಲಮಂಡಳಿಯು ಮೇ 20 ರಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಸಮಿತಿ ರಚನೆ: ನೀರಿನ ದರ ಏರಿಕೆ ಮಾಡಲು ಜಲಮಂಡಳಿ ಆಂತರಿಕ ಸಮಿತಿಯನ್ನು ರಚಿಸಿದ್ದು, ಪ್ರಸ್ತುತ ಖರ್ಚು, ವೆಚ್ಚಗಳನ್ನು ಲೆಕ್ಕ ಹಾಕುವುದರೊಂದಿಗೆ ಮುಂದಿನ ಐದಾರು ವರ್ಷಕ್ಕೆ ಲೆಕ್ಕ ಸರಿದೂಗುವಂತೆ ನೋಡಿಕೊಂಡು ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದರ ಏರಿಕೆ ಮಾಡುವ ಸಂಬಂಧ ನೇಮಕ ಮಾಡಿರುವ ಸಮಿತಿಯು ಸಾಕಷ್ಟು ವಿಚಾರದಲ್ಲಿ ಲೆಕ್ಕಾಚಾರ ಮಾಡಿ ಕರಡು ಪ್ರತಿಯನ್ನು ಸಿದ್ಧಪಡಿಸಿದೆ. ಎರಡು-ಮೂರು ವಿಧಗಳಲ್ಲಿ ದರ ಪರಿಷ್ಕರಿಸಲು ಚಿಂತಿಸಿದ್ದು, ಮಂಡಳಿಯನ್ನು ಲಾಭದಲ್ಲಿ ತರುವ ಕಡೆ ಒಂದು ಲೆಕ್ಕ, ಸಾರ್ವಜನಿಕರಿಗೆ ಹೊರೆಯಾಗದಂತೆ ಮತ್ತೊಂದು ಲೆಕ್ಕಾಚಾರದ ಪಟ್ಟಿ ಸಿದ್ಧಪಡಿಸಲಾಗಿದೆ. ಅದನ್ನು ಸರಕಾರಕ್ಕೆ ಸಲ್ಲಿಸಲಿದ್ದು, ಅನುಮೋದನೆ ಸಿಗಬೇಕಿದೆ.

ನೀರು ಪೂರೈಕೆ ಪ್ರಸ್ತುತ ದರ: ಗೃಹ ಸಂಪರ್ಕಗಳಿಗೆ 0-8,000 ಲೀಟರ್ ಗಳವರೆಗೆ ಪ್ರತಿ ಸಾವಿರ ಲೀಟರ್‌ಗೆ 7 ರೂ. ದರ ನಿಗದಿಪಡಿಸಲಾಗಿದೆ. 8,001-25 ಸಾವಿರ ಲೀಟರ್ ನೀರು ಬಳಸುವ ಕಟ್ಟಡಗಳಿಗೆ ಪ್ರತಿ ಸಾವಿರ ಲೀಟರ್‌ಗೆ 11 ರೂ. ದರವಿದೆ. 25,001 ರಿಂದ 50 ಸಾವಿರ ಲೀಟರ್‌ವರೆಗೆ ನೀರು ಬಳಸುವ ಕಟ್ಟಡಕ್ಕೆ ಪ್ರತಿ ಸಾವಿರ ಲೀಟರ್‌ಗೆ 26 ರೂ. ನಿಗದಿಪಡಿಸಲಾಗಿದೆ.

50 ಸಾವಿರ ಲೀಟರ್ ಮೇಲ್ಪಟ್ಟು ನೀರು ಬಳಸುವ ಕಟ್ಟಡದಲ್ಲಿ ಪ್ರತಿ ಸಾವಿರ ಲೀಟರ್‌ಗೆ 45 ರೂ. ದರ ಇದೆ. 8 ಸಾವಿರ ಲೀಟರ್‌ವರೆಗೆ ನೀರು ಬಳಸುವ ಕಟ್ಟಡಗಳಿಗೆ 14 ರೂ.ಒಳಚರಂಡಿ ಶುಲ್ಕವಿದ್ದು, ಅದರ ಮೇಲ್ಪಟ್ಟ ಕಟ್ಟಡಗಳಿಗೆ ಶೇ.25 ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ. ಬೊರ್‌ವೆಲ್‌ಗೂ 100 ರೂ. ದರವಿದೆ.

ಸಗಟು ಬಳಕೆದಾರರಿಗೆ ವಿಭಿನ್ನ ದರಗಳಿವೆ. ಕೈಗಾರಿಕೆ ಹಾಗೂ ಈಜುಕೊಳ, ಬಿಐಎಎಲ್, ಬಿಡದಿ ಕೈಗಾರಿಕೆ ಪ್ರದೇಶಗಳಿಗೆ ಸಾವಿರ ಲೀಟರ್‌ಗೆ 90 ರೂ. ದರವಿದೆ. ಸಗಟು ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 10 ರೂ. ದರ ನಿಗದಿಯಾಗಿದ್ದು, ಶೇ. 25 ಒಳಚರಂಡಿ ಶುಲ್ಕವಿದೆ. ಅಗರ ಗ್ರಾಪಂ ವ್ಯಾಪ್ತಿ, ಬಿಬಿಎಂಪಿ ವ್ಯಾಪ್ತಿಯ 7 ಸಿಎಂಸಿ, 1 ಟಿಎಂಸಿ ವ್ಯಾಪ್ತಿಯಲ್ಲಿ ಪ್ರತಿ ಸಾವಿರ ಲೀಟರ್‌ಗೆ 19 ರೂ. ಹಾಗೂ ಶೇ.25 ಒಳಚರಂಡಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News