ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಝಿಲ್ಯಾಂಡ್ ಮಣಿಸಿದ ಆಸ್ಟ್ರೇಲಿಯ

Update: 2019-05-10 18:52 GMT

ಬ್ರಿಸ್ಬೇನ್, ಮೇ 10: ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ಮೊದಲು ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ತನ್ನ ಮೂರನೇ ಹಾಗೂ ಕೊನೆಯ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯ ಗೆದ್ದುಕೊಂಡಿದೆ.

ಸ್ಟೀವನ್ ಸ್ಮಿತ್(ಔಟಾಗದೆ 91) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(70)ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದರು.

ಮಂದಬೆಳಕು ಬಾಧಿತ ಪಂದ್ಯದಲ್ಲಿ ಆಸ್ಟ್ರೇಲಿಯ ಡಕ್‌ವರ್ತ್/ಲೂಯಿಸ್/ಸ್ಟರ್ನ್ ಪದ್ಧತಿಯ ಪ್ರಕಾರ 5 ವಿಕೆಟ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 286 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮಂದ ಬೆಳಕು ಪಂದ್ಯಕ್ಕೆ ಅಡ್ಡಿಪಡಿಸುವ ಮೊದಲು ಆಸೀಸ್ 44 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 248 ರನ್ ಗಳಿಸಿತು.

ಇಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಔಟಾಗದೆ 89 ರನ್ ಗಳಿಸಿದ ಮಾಜಿ ನಾಯಕ ಸ್ಮಿತ್ ಮತ್ತೊಂದು ಸೊಗಸಾದ ಬ್ಯಾಟಿಂಗ್ ಮಾಡಿದರು. ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್ ಆರಂಭಿಕ ಆಟಗಾರನಾಗಿ ವಿಫಲರಾಗಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 2, 0 ಹಾಗೂ 39 ರನ್ ಗಳಿಸಿದ್ದಾರೆ.

ಸ್ಮಿತ್‌ರಂತೆಯೇ ಉತ್ತಮ ಲಯದಲ್ಲಿರುವ ಮ್ಯಾಕ್ಸ್ ವೆಲ್ 48 ಎಸೆತಗಳಲ್ಲಿ 70 ರನ್ ಗಳಿಸಿದ್ದಾರೆ. ಬುಧವಾರ ನಡೆದಿದ್ದ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ 52 ರನ್ ಗಳಿಸಿದ್ದರು.

ನ್ಯೂಝಿಲ್ಯಾಂಡ್‌ನ ಪರ ಹೊಸ ಮುಖ ವಿಲ್ ಯಂಗ್ ಸತತ 2ನೇ ಶತಕದಿಂದ ಗಮನ ಸೆಳೆದರು. ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ನೇತೃತ್ವದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ 26ರ ಹರೆಯದ ಯಂಗ್ ಬುಧವಾರ ನಡೆದ ಪಂದ್ಯದಲ್ಲಿ 130 ರನ್ ಗಳಿಸಿದ್ದರೆ, ಇಂದಿನ ಪಂದ್ಯದಲ್ಲಿ ಮಾರ್ಕಸ್ ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸುವ ಮೊದಲು 111 ರನ್ ಗಳಿಸಿದ್ದರು.

ಕಿವೀಸ್ ಆರಂಭಿಕ ಆಟಗಾರ ಜಾರ್ಜ್ ವರ್ಕರ್ 59 ರನ್ ಕಾಣಿಕೆ ನೀಡಿದರು. ಆಸೀಸ್ ಪರ ಕಮಿನ್ಸ್ (4-32)ಯಶಸ್ವಿ ಬೌಲರ್ ಎನಿಸಿಕೊಂಡರು.

ಆಸ್ಟ್ರೇಲಿಯ ಜೂ.1 ರಂದು ಬ್ರಿಸ್ಬೋಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸುವ ಮೊದಲು ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಎದುರು ಸೌತಾಂಪ್ಟನ್‌ನಲ್ಲಿ ಇನ್ನೆರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News