ಸಾಹಿತ್ಯದಲ್ಲಿಯೂ ರಾಜಕೀಯ ತುಂಬಿಕೊಂಡಿದೆ: ಡಾ.ದೊಡ್ಡರಂಗೇಗೌಡ

Update: 2019-05-11 12:48 GMT

ಬೆಂಗಳೂರು, ಮೇ 11: ರಾಜಕಾರಣದಲ್ಲಿರುವಂತೆ ಸಾಹಿತ್ಯ ಲೋಕದಲ್ಲಿಯೂ ರಾಜಕೀಯ ತುಂಬಿ ಹೋಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕಸಾಪದಲ್ಲಿ ಡಾ.ವಿ.ಗೋಪಾಲಕೃಷ್ಣ ಭಾಷಾ ಲೋಕ ಪ್ರತಿಷ್ಠಾನದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಬಾರದು. ಸಾಹಿತ್ಯವನ್ನು ಎಲ್ಲರೂ ಓದುತ್ತಾರೆ. ಆದರೆ, ಇಂದಿನ ಸಾಹಿತ್ಯ ಲೋಕದಲ್ಲಿ ವ್ಯಾಪಕವಾಗಿ ರಾಜಕೀಯ ತುಂಬಿಕೊಂಡಿದೆ ಎಂದು ಹೇಳಿದರು.

ರಾಜಕೀಯ ವ್ಯಕ್ತಿಗಳು ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಾಗಿ ನಾಟಕ ಮಾಡುತ್ತಿದ್ದಾರೆ. ನಾಟಕಗಳಲ್ಲಿನ ಪಾತ್ರದಾರಿಗಳಂತೆ ವರ್ತಿಸುತ್ತಾರೆ. ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬದಲಾಗಿಬಿಡುತ್ತಾರೆ ಎಂದ ಅವರು, ಇಂತಹ ರಾಜಕಾರಣಿಗಳ ಕುರಿತು ಮಾತನಾಡುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ. ಇದರಿಂದ ಸಮಯವೂ ವ್ಯರ್ಥವಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಬಂದರೆ ನಾವು ಇಲ್ಲದಂತಾಗಿಬಿಡುತ್ತೇವೆ ಎಂಬ ಭಾವನೆ ಹಲವರಲ್ಲಿದೆ. ಆದರೆ, ಡಾ.ವಿ.ಗೋಪಾಲಕೃಷ್ಣರು ಅತಿದೊಡ್ಡ ನಗರದಲ್ಲಿಯೂ ನಾವು ಸಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಎಂದಿಗೂ ಸೋಲು ಕಂಡವರಲ್ಲ. ಗೋಪಾಲಕೃಷ್ಣ ಶ್ರದ್ಧಾವಂತ ಶ್ರಮಜೀವಿಯಾಗಿದ್ದರು ಎಂದು ನುಡಿದರು.

ಗೋಪಾಲಕೃಷ್ಣ ಭಾಷಾ ಲೋಕ ಪ್ರತಿಷ್ಠಾನದಿಂದ ಅರ್ಹರಿಗಷ್ಟೇ ಪ್ರಶಸ್ತಿ ನೀಡಲಾಗುತ್ತಿದ್ದು, ಅಭಿಜಾತರಿಗೆ ಅಭಿಜಾತ ಮನ್ನಣೆ ನೀಡಲಾಗಿದೆ. ಪ್ರಶಸ್ತಿ ನೀಡುವಾಗ ವಿದ್ವತ್ತಿಗೆ ಮನ್ನಣೆ ನೀಡಬೇಕೇ ಹೊರತು ಶಿಫಾರಸ್ಸಿಗೆ ಅಲ್ಲ. ಇಂತಹ ಪ್ರಶಸ್ತಿ ನೊಬೆಲ್‌ಗೆ ಸಮನಾಗಿರುತ್ತದೆ. ಆದುದರಿಂದ ಅರ್ಹರಿಗೆ ಪ್ರಶಸ್ತಿಗಳು ಸಿಗಬೇಕು ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಗೌರಿಬಿದನೂರಿನ ಪ್ರಜ್ಞಾ ಟ್ರಸ್ಟ್‌ನಿಂದ ನಿರ್ಮಿಸಿದ್ದ ಡಾ.ವಿ.ಗೋಪಾಲಕೃಷ್ಣ ಸಾಕ್ಷ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಅನಂತರ ಇದನ್ನು ನಿರ್ಮಿಸಿದ ಟ್ರಸ್ಟ್‌ನ ದಂಪತಿಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬೊವ್ವೆರಿಯಂಡ ನಂಜಮ್ಮ ಹಾಗೂ ಬಿ.ಎಂ.ಚಿಪ್ಪಣ್ಣ ದಂಪತಿಗೆ ಪ್ರತಿಷ್ಠಾನದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಸಂಶೋಧಕ ಡಾ.ಎಚ್.ಎಸ್.ಗೋಪಾಲರಾವ್, ಬಹುಭಾಷಾ ತಜ್ಞೆ ಡಾ.ಕೆ.ಆರ್.ಸಂಧ್ಯಾರೆಡ್ಡಿ, ಪ್ರಾಧ್ಯಾಪಕ ಡಾ.ಕೆ.ಎಂ.ಲೋಕೇಶ್ ಸೇರಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News