ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ, ಮೋದಿ ಪ್ರಧಾನಿ ಆಗುವುದಿಲ್ಲ: ಸಿದ್ದರಾಮಯ್ಯ

Update: 2019-05-11 13:10 GMT

ಕಲಬುರಗಿ, ಮೇ 11: ‘ಶಾಸಕರ ಖರೀದಿಗೆ ಬಿಜೆಪಿ ಮುಖಂಡರಿಗೆ ಹಣ ಎಲ್ಲಿಂದ ಬರುತ್ತದೆ. ಪ್ರಧಾನಿ ಮೋದಿ ಕೊಡ್ತಾರಾ, ಅಮಿತ್ ಶಾ ಕೊಡ್ತಾರಾ ಅಥವಾ ಯಡಿಯೂರಪ್ಪ ಕೊಡ್ತಾರಾ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ಇಲ್ಲಿನ ಚಿಂಚೋಳಿ ಉಪ ಚುನಾವಣೆ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ 20 ಶಾಸಕರು ಅತೃಪ್ತಿ ಹೊಂದಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎಂದು ಯಡಿಯೂರಪ್ಪ ಒಂದು ವರ್ಷದಿಂದ ಹೇಳುತ್ತಲೇ ಇದ್ದಾರೆಂದು ವಾಗ್ದಾಳಿ ನಡೆಸಿದರು.

ಶಾಸಕರನ್ನು ಖರೀದಿಸಿ, ಮೈತ್ರಿ ಸರಕಾರವನ್ನು ಬೀಳಿಸುವುದು ವಿರೋಧ ಪಕ್ಷದ ಕೆಲಸವೇ? ಯಡಿಯೂರಪ್ಪಗೆ ಸರಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಸಂಖ್ಯಾಬಲ ತೋರಿಸಲು ಬಿಎಸ್‌ವೈಗೆ ಆಗಲಿಲ್ಲ. ಹೀಗಾಗಿ ಹತಾಶರಾಗಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸತ್ಯ-ಸುಳ್ಳು ಎರಡೂ ಗೊತ್ತಿಲ್ಲ: ‘ಜೆಡಿಎಸ್‌ನಿಂದ ನಾನು ಹೊರಬಂದಿಲ್ಲ. ಅಹಿಂದ ಸಮಾವೇಶ ಮಾಡಿದ್ದಕ್ಕೆ ದೇವೇಗೌಡ ಅವರು ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದರು. ಬಿಜೆಪಿ ಮುಖಂಡ ಆರ್.ಅಶೋಕ್‌ಗೆ ಸತ್ಯ-ಸುಳ್ಳು ಎರಡೂ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ನಾನು ಜೆಡಿಎಸ್ ಬಿಟ್ಟಿದ್ದಕ್ಕೆ ಕಾರಣವೇ ಬೇರೆ. ಆದರೆ, ಉಮೇಶ್ ಜಾಧವ್ ಕಾಂಗ್ರೆಸ್ ತ್ಯಜಿಸಿದ್ದು ಏಕೆ ಎಂದು ಗೊತ್ತಾಗುತ್ತಿಲ್ಲ ಎಂದ ಸಿದ್ದರಾಮಯ್ಯ, ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಪ್ರಧಾನಿ ಆಗುವುದಿಲ್ಲ. ರಾಹುಲ್ ಗಾಂಧಿಯೇ ಪ್ರಧಾನಿ ಆಗುತ್ತಾರೆ ಎಂದರು.

ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡನ ಜತೆ ಮಾತನಾಡಿಕೊಂಡು ನಾವು ಮೈತ್ರಿ ಮಾಡಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಮಾತನಾಡಿ ಮೈತ್ರಿ ಮಾಡಿಕೊಂಡಿದ್ದು, ಹೀಗಾಗಿ ನಾರಾಯಣಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News