ಕಪೋಲಕಲ್ಪಿತ-ಪೂರ್ವಾಗ್ರಹ ಪೀಡಿತ ಸುದ್ದಿ ಪ್ರಸಾರ ಖೇಧಕರ: ಮಹಮ್ಮದ್ ಇಲ್ಯಾಸ್ ತುಂಬೆ
ಬೆಂಗಳೂರು, ಮೇ 11: ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ವಯೋವೃದ್ಧರೊಬ್ಬರನ್ನು ತಪಾಸಣೆ ಮಾಡುವ ಸಾಮಾನ್ಯ ಪ್ರಕ್ರಿಯೆಯ ಸಿ.ಸಿ ಕ್ಯಾಮೆರಾದ ದೃಶ್ಯಾವಳಿಯನ್ನು ಅಲ್ಲಿನ ಸಿಬ್ಬಂದಿ ದೃಶ್ಯ ಮಾಧ್ಯಮದವರಿಗೆ ಅನಧಿಕೃತವಾಗಿ ನೀಡಿ, ಸ್ಥಳೀಯ ವ್ಯಾಪಾರಸ್ಥ ವೃದ್ಧರನ್ನು ‘ಭಯೋತ್ಪಾದಕ’ ಎಂದು ಬಿಂಬಿಸಿ ಸುದ್ದಿ ಮಾಡಿಸುವುದರಲ್ಲಿ ಒಂದು ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.
ಒಬ್ಬ ಅಮಾಯಕ ವಯೋವೃದ್ಧರಿಗೆ ಭಯೋತ್ಪಾದಕ ಪಟ್ಟ ಕಟ್ಟುವ ದೃಶ್ಯ ಮಾಧ್ಯಮದವರ ನಡೆ ಕೇವಲ ಬೇಜವಾಬ್ದಾರಿತನವಲ್ಲದೆ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ಅನುಮಾನ ಮತ್ತು ಅವಮಾನಕ್ಕೆ ಒಳಗಾಗುವಂತಹ ಸ್ಥಿತಿ ನಿರ್ಮಾಣಕ್ಕೆ ಈ ಕರಾಳ ಘಟನೆಯೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ನಿಟ್ಟಿನಲ್ಲಿ ಈ ಘಟನೆಯನ್ನು ಬಳಸಿಕೊಂಡಿರುವ ಪರದೆಯ ಹಿಂದೆ ಮತ್ತು ಮುಂದೆ ಇರುವಂತಹ ವಿಕೃತ ಮನಸ್ಸಿನ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಘಟನೆಯ ಕುರಿತು ಮಾಧ್ಯಮದವರು ಕೂಲಂಕಶವಾಗಿ ವಿಚಾರಿಸದೆ, ಅದರ ಸತ್ಯಾಸತ್ಯತೆಯನ್ನು ಅರಿಯದೆ, ಲಭ್ಯವಾದ ಕಟ್ಟುಕತೆಯನ್ನೆ ಪೂರ್ವಗ್ರಹ ಪೀಡಿತವಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ, ಜನತೆಗೆ ತಪ್ಪುಸಂದೇಶ ನೀಡಿ ಸಮಾಜವನ್ನು ದುರ್ಬಳಕೆ ಮಾಡಲು ಪ್ರಯತ್ನಿಸಿರುವುದು ಅತ್ಯಂತ ಖೇಧಕರ ಎಂದು ಮಹಮ್ಮದ್ ಇಲ್ಯಾಸ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.