ಸಿದ್ದರಾಮಯ್ಯ ವಿರುದ್ಧದ ಅಕ್ರಮ ನಿವೇಶನ ಆರೋಪ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ
ಬೆಂಗಳೂರು, ಮೇ 11: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಅಕ್ರಮ ನಿವೇಶನ ಆರೋಪ ಪ್ರಕರಣ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದೆ. ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಅಕ್ರಮ ಭೂ ಒತ್ತುವರಿ, ಅಧಿಕಾರ ದುರ್ಬಳಕೆ ಆರೋಪದಡಿ ಮೈಸೂರು ತಾಲೂಕಿನ ಹಿನಕಲ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಮೈಸೂರು ಸಿಜೆಎಂ ನ್ಯಾಯಾಧೀಶ ಯಶವಂತಕುಮಾರ್, ಮೈಸೂರು ಕೋರ್ಟ್‌ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಸಿದ್ದರಾಮಯ್ಯ ಅವರು, ಮೈಸೂರು ಹಿನಕಲ್ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಮ್ಮ ಎಂಬುವರ ಸರ್ವೇ ನಂ.‘70/4ಎ’ನಲ್ಲಿ ಜಮೀನು ಖರೀದಿ ಮಾಡಿದ್ದರು. ಬಳಿಕ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ಅನುಮತಿ ಪಡೆಯದೆ ಸರ್ವೇ ನಂ.‘70/4ಎ’ನಲ್ಲಿ ಮನೆ ಕಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ, 2003ರಲ್ಲಿ ಮನೆಯನ್ನು ಸಿದ್ದರಾಮಯ್ಯ ಮಾರಾಟ ಮಾಡಿದ್ದರು ಎಂಬ ಆರೋಪವನ್ನೂ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವವರು ಸಿದ್ದರಾಮಯ್ಯ ಅಕ್ರಮವಾಗಿ ನಿವೇಶನ ಮಾರಾಟ ಮಾಡಿದ್ದಾರೆ ಎಂದು ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಕುರಿತು ಪೊಲೀಸರು ಬಿ. ರಿಪೋರ್ಟ್ ಹಾಕಿದ್ದರು. ಬಳಿಕ ಬಿ-ರಿಪೋರ್ಟ್ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ದೂರುದಾರ ಗಂಗರಾಜು ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಅಂದಿನ ಮುಡಾ ಅಧ್ಯಕ್ಷ ಸಿ.ಬಸವೇಗೌಡ, ಅಂದಿನ ಮುಡಾ ಆಯುಕ್ತ ಧ್ರುವಕುಮಾರ್ ಹಾಗೂ ಈಗಿನ ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್ ವಿರುದ್ಧ ದೂರು ನೀಡಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 68 ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಇನ್ನೂ 30ಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಬೇಕಾಗಿದೆ. ಹೀಗಾಗಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.