ಪರಕೀಯ

Update: 2019-05-11 14:28 GMT

ಮೆಟ್ಟಿಲು ಹತ್ತುತ್ತಾ ಮನೆಬಾಗಿಲನ್ನು ತಲುಪಿದ ವಸಂತ, ನಸುಕಿನ ಸೂರ್ಯ ಹೂವನ್ನು ಚುಂಬಿಸುವಷ್ಟು ಮೆಲುವಾಗಿ ಬಾಗಿಲನ್ನು ಬಡಿದ. ತನ್ನ ಮಕ್ಕಳು ಇಷ್ಟು ಹೊತ್ತಿಗೆ ಮಲಗಿರುತ್ತಾರೆ. ಮಾತ್ರವಲ್ಲ, ಮನೆಮಾಲಕರು ಏನಾದರೂ ಅಂದಾರೆಂಬ ಭಯವೂ ಆತನಲ್ಲಿತ್ತು. ಬಾಗಿಲು ತೆರೆದ ಹೆಂಡತಿಯ ನಗುಮೊಗ ಆತನ ಆಯಾಸವನ್ನೆಲ್ಲಾ ಇನ್ನಿಲ್ಲದಂತಾಗಿಸಿತು. ‘ಬನ್ನಿ, ಊಟ ಬಡಿಸ್ತೇನೆ’ ಎಂದ ಅವಳು ನೆಲದ ಮೇಲೆ ಎರಡು ಬಟ್ಟಲುಗಳನ್ನಿಟ್ಟಳು. ‘ನೀನಿನ್ನೂ ಊಟ ಮಾಡಿಲ್ವಾ?’ ವಸಂತನ ಪ್ರಶ್ನೆಗೆ ‘ಉಹೂಂ’ ಎಂಬ ಉತ್ತರವಷ್ಟೇ ಅವಳಿಂದ ಹೊರಬಂತು. ವಸಂತ ಅಭಿಮಾನದಿಂದ ಹೆಂಡತಿಯನ್ನೊಮ್ಮೆ ನೋಡಿದ, ಹಿಂದೆಂದೂ ನೋಡಿರದವನಂತೆ. ಎಂದೂ ಅವಳನ್ನು ಹೊರಗೆ ಸುತ್ತಾಡಿಸಿದ್ದಿಲ್ಲ, ಸಿನೆಮಾಕ್ಕೆ ಕರೆದುಕೊಂಡು ಹೋದದ್ದಿಲ್ಲ. ವರ್ಷಕ್ಕೊಮ್ಮೆಯೋ, ಎರಡು ಸಲವೋ ಮಾತ್ರವೇ ಸೀರೆ ತೆಗೆದುಕೊಡುತ್ತಿದ್ದದ್ದು, ಅದೂ ತನ್ನ ಚಿಕ್ಕ ಜೇಬಿನ ತೂಕಕ್ಕೆ ಸರಿಯಾಗಿ. ಆದರೂ ಅವಳ್ಯಾವತ್ತೂ ಅಡುಗೆ ಕೋಣೆಗೆ ಬೀಗ ಜಡಿದದ್ದಿಲ್ಲ. ಗಂಡನಿಗಿಂತ ಮೊದಲು ಊಟ ಮಾಡಿದ್ದೂ ಇಲ್ಲ. ವಸಂತನೂ ಕೂಡ ಅಷ್ಟೆ. ರಾತ್ರಿ ಎಷ್ಟೇ ಹೊತ್ತಾದರೂ ಊಟ ಮಾಡುತ್ತಿದ್ದದ್ದು ಮನೆಯಲ್ಲಿಯೇ. ತನಗಾಗಿಯೇ ಕಾದು ಕುಳಿತಿರುವ ಹೆಂಡತಿಯ ಮನಸ್ಸನ್ನು ನೋಯಿಸುವುದು ಅವನಿಗೂ ಇಷ್ಟವಿರಲಿಲ್ಲ. ಹಳ್ಳಿಯಲ್ಲಿದ್ದ ನಾಲ್ಕು ಎಕರೆ ಭೂಮಿಯನ್ನು ಮಾರಿ, ಬೆಂಗಳೂರೆಂಬ ಮಹಾನಗರಿಯನ್ನು ಸೇರಿಕೊಳ್ಳುವುದರಲ್ಲಿಯೂ ಕೂಡ ಹೆಂಡತಿಯ ಮನಸ್ಸನ್ನು ನೋಯಿಸ ಬಾರದೆಂಬ ಆತನ ಭಾವನೆಯೇ ಕೆಲಸ ಮಾಡಿತ್ತು.

*****

ವಸಂತ ತೊದಲು ನುಡಿಯುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡವನು. ಕೂಲಿ ಕೆಲಸ ಮಾಡಿಕೊಂಡು ವಸಂತನನ್ನು ಸಾಕಿ ಬೆಳೆಸಿದ್ದು ಆತನ ತಾಯಿಯೇ. ಆದರೆ ಆತನಿಗೆ ಮದುವೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೇ ತಾಯಿಯೂ ಕೂಡ ಇಹಲೋಕ ಯಾತ್ರೆ ಮುಗಿಸಿಯಾಗಿತ್ತು. ಬದುಕೇ ಶೂನ್ಯ ಎಂಬ ಭಾವ ವಸಂತನನ್ನು ದಟ್ಟವಾಗಿ ಆವರಿಸಿತ್ತು. ಹೆಂಡತಿ ಯ ಮಡಿಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದ, ಚಿಕ್ಕ ಮಗುವಿನಂತೆ.

ಊರು ಬಿಟ್ಟು ಬೆಂಗಳೂರಿಗೆ ಹೋಗುವ ಸಲಹೆಯನ್ನು ಹೆಂಡತಿ ವಸಂತನಿಗೆ ನೀಡಿದ್ದು ಆವಾಗಲೇ. ಆರಂಭದಲ್ಲಿ ವಸಂತ ಒಪ್ಪಿಕೊಂಡಿರಲಿಲ್ಲ. ಆದರೆ ಹೆಂಡತಿಯ ಒತ್ತಾಯ ಮನಸ್ಸು ಬದಲಾಯಿಸಿತ್ತು. ಹಳ್ಳಿ ಬಿಟ್ಟು ನಗರ ಸೇರಿಕೊಂಡರೆ ಬೇಸರದಿಂದಿರುವ ತನ್ನ ಗಂಡನ ಮನಃಸ್ಥಿತಿ ಸರಿಹೋಗಬಹುದೆಂಬ ಯೋಚನೆ ಆತನ ಪತ್ನಿಯದ್ದಾಗಿತ್ತು. ಇದ್ದ ನಾಲ್ಕೆಕರೆ ಭೂಮಿಯನ್ನು ಮಾರುವ ದಿನ ವಸಂತನ ನಾಲ್ಕು ಹನಿ ಕಣ್ಣೀರುಗಳು ನೆಲವನ್ನು ಸೇರಿದ್ದವು.

 ಭೂಮಿ ಮಾರಿ, ಅದರಿಂದ ಬಂದ ಹಣವನ್ನು ತೆಗೆದುಕೊಂಡು ಸಂಸಾರ ಸಮೇತನಾಗಿ ಪಟ್ಟಣ ಸೇರಿದ ವಸಂತನಿಗೆ ಬಾಡಿಗೆ ಮನೆ ಹಿಡಿಯುವಷ್ಟರಲ್ಲಿ ಸಾಕುಸಾಕಾಗಿಹೋಗಿತ್ತು. ಕೃಷಿ ಕೆಲಸ ಮಾತ್ರ ಅರಿತಿದ್ದ ವಸಂತನಿಗೆ ಕೆಲಸ ಪಡೆಯುವುದೂ ಸುಲಭದ ಮಾತಾಗಿರಲಿಲ್ಲ. ಹೇಗೋ ಕಷ್ಟಪಟ್ಟು ಹೊಟೇಲೊಂದರಲ್ಲಿ ಸಪ್ಲೇಯರ್ ಆಗಿ ಸೇರಿಕೊಂಡವನು, ಒಂದೆರಡು ವರ್ಷಗಳಲ್ಲಿಯೇ ಮಸಾಲ್‌ಪುರಿ ತಯಾರಿಸುವುದನ್ನೂ ಕಲಿತುಕೊಂಡ. ಬೆಳಿಗ್ಗೆಯಿಡೀ ಸಪ್ಲೇಯರ್ ಕೆಲಸ, ಸಂಜೆಯಿಂದ ರಾತ್ರಿ ಒಂಬತ್ತರವರೆಗೂ ಮಸಾಲ್‌ಪುರಿ ತಯಾರಿ. ಗಾಣದ ಎತ್ತಿನ ಅಪ್ಪನಂತೆ ದುಡಿದರೂ ವಸಂತನಿಗೆ ಸಿಗುತ್ತಿದ್ದದ್ದು ಬಿಡಿಗಾಸು ಮಾತ್ರ. ಬಂದ ಲಾಭವೆಲ್ಲ ಹೊಟೇಲ್ ಮಾಲಕನ ಕಿಸೆಗೆ. ಟಿಪ್ಸ್ ಏನಾದರೂ ಸಿಕ್ಕಿದರೆ ಅದುವೇ ಬೋನಸ್ ವಸಂತನಿಗೆ.

 ಬೆಂಗಳೂರಿಗೆ ಬಂದ ಹೊಸತರಲ್ಲಿ ಪಟ್ಟಣದ ಬದುಕು ವಸಂತನಲ್ಲಿ ಆಶ್ಚರ್ಯ ಮೂಡಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ ಬೇಸರವನ್ನು. ಇವರ ಮನೆಗೆ ತಾಗಿಕೊಂಡೇ ಹಲವು ಮನೆಗಳಿದ್ದರೂ ಕೂಡ ಅವರ ಗಂಟಲು ಇವರೆದುರು ಯಾವತ್ತೂ ಭಾರತ್ ಬಂದ್ ಘೋಷಿಸಿಬಿಡುತ್ತಿತ್ತು. ಎದುರು ಸಿಕ್ಕರೆ, ಅವರ ಮೂಡು ಚೆನ್ನಾಗಿದ್ದರೆ ಒಂದು ನಗು ಮಾತ್ರ. ಅದೂ ಕೂಡ ಬೇಕೋ, ಬೇಡವೋ ಎಂಬಂತೆ. ಹಳ್ಳಿ ವಾತಾವರಣಕ್ಕೆ ಒಗ್ಗಿಹೋಗಿದ್ದ ವಸಂತನ ಹೆಂಡತಿ ತಾವಿರುವುದು ಬಾಡಿಗೆ ಜಾಗದಲ್ಲಿ ಎಂಬುದನ್ನೂ ಮರೆತು, ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಕೊಯ್ದಿದ್ದಳಷ್ಟೇ. ವಿಷಯ ತಿಳಿದ ಮನೆಮಾಲಕರ ಪತ್ನಿ ಬಾಯಿಗೆ ಬಂದದ್ದು, ಬಾರದ್ದು ಎಲ್ಲವನ್ನೂ ಸೇರಿಸಿ ಬೈದಿದ್ದಳು. ‘‘ಪೇಟೆಗೆ ಬರಬೇಕೂಂತ ಹಠ ಮಾಡುತ್ತಿದ್ದೆಯಲ್ಲ, ಈಗ ಅನುಭವಿಸು’’ ವಸಂತ ಕೋಪದಲ್ಲಿ ಹೀಗೆ ನುಡಿದನಾದರೂ, ಪತ್ನಿಯ ಅಳುಮೋರೆ ಕಂಡು ಬೇಸರವಾಗದಿರಲಿಲ್ಲ. ಹಳ್ಳಿಯ ನೆನಪು ಕಿತ್ತುಕೊಂಡು ಬಂದಿತ್ತು. ಹಳ್ಳಿಯಲ್ಲಿದ್ದಾಗ ಹಿಂದಿನ ಮನೆ ಶಾಂತಕ್ಕ ದಿನಕ್ಕೆರಡು ಸಲ ಎರಡೂ ಹಿಡಿ ತುಂಬುವಷ್ಟು ಕರಿಬೇವಿನ ಸೊಪ್ಪು ಕಿತ್ತುಕೊಂಡು ಹೋಗುತ್ತಿದ್ದದ್ದುಂಟು, ತಾನೇ ಗಿಡವನ್ನು ಬೆವರಿಳಿಸಿ ಬೆಳೆಸಿದ್ದೇನೆ ಎನ್ನುವ ಹಾಗೆ. ಯಾವತ್ತಾದರೂ ತಾನಾಗಲಿ, ತನ್ನ ಹೆಂಡತಿಯಾಗಲಿ ಅವಳನ್ನು ಕೇಳಿದ್ದಿಲ್ಲ. ಹಿಡಿ ಕರಿಬೇವಿನ ಸೊಪ್ಪನ್ನಿಟ್ಟುಕೊಂಡು ಅರಮನೆ ಕಟ್ಟುತ್ತಾರೇನೋ ಇವರು? ಎಂದು ಆ ದಿನ ವಸಂತನಿಗೆ ಅನಿಸಿತ್ತು. ಇದಾದ ಮೇಲಂತೂ, ತಮ್ಮ ಪಾಡಿಗೆ ತಾವಿರುವ ಪರಿಪಾಠವನ್ನು ವಸಂತ ಮತ್ತು ಆತನ ಪತ್ನಿ ರೂಢಿಸಿಕೊಂಡಿದ್ದರು.

*****

 ಹೆಂಡತಿಯೊಂದಿಗೆ ಊಟ ಮುಗಿಸಿದ ವಸಂತನ ತಲೆಯಿನ್ನೂ ರಜೆ ತೆಗೆದುಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ತಾನು ಖರೀದಿಸಿದ್ದ ಭೂಮಿಯಲ್ಲಿ ಮನೆ ನಿರ್ಮಿಸುವುದು ಹೇಗೆಂಬ ಯೋಚನೆಯನ್ನೇ ಆತನ ತಲೆ ತೂಕ ಹಾಕುತ್ತಿತ್ತು. ಆತ ಭೂಮಿ ಖರೀದಿಸಿದ್ದು ತಾಯಿಯ ನೆನಪಿಗಾಗಿ. ಭೂಮಿ ಕೊಂಡುಕೊಂಡ ದಿನ ವಸಂತನಿಗಾಗಿದ್ದ ಸಂತೋಷ ಅಷ್ಟಿಷ್ಟಲ್ಲ. ಸಂತೋಷವನ್ನು ಅಳೆಯುವ ಮೆಷಿನ್ನು ಒಂದು ವೇಳೆ ಇದ್ದರೂ ಆ ಮೆಷಿನ್ನೂ ಸೋಲೊಪ್ಪಿಕೊಂಡು ಕುಳಿತುಬಿಡುತ್ತಿತ್ತೇನೊ. ಕಳೆದುಕೊಂಡಿದ್ದ ತಾಯಿಯನ್ನು ಮತ್ತೆ ಪಡೆದಂತಹ ಸಂತೋಷ. ಅಲ್ಲೇ ಒಂದು ಮನೆ ಕಟ್ಟಿಸಬೇಕು, ಅದಕ್ಕೆ ತನ್ನ ತಾಯಿಯದ್ದೇ ಹೆಸರಿಡಬೇಕು ಎಂಬ ದೂರಾಲೋಚನೆಯೂ ಕೂಡಾ ಅಂದೇ ಆತನ ತಲೆ ಹತ್ತಿ ಕುಳಿತುಬಿಟ್ಟಿತ್ತು. ಇದ್ದ ಹಣವನ್ನೆಲ್ಲ ಭೂಮಿಯ ಮೇಲೆ ಸುರಿದಿರುವ ತನ್ನಿಂದ ಈಗಲೇ ಮನೆ ಕಟ್ಟಲು ಸಾಧ್ಯವಿಲ್ಲವೆಂಬ ಅರಿವೂ ಆತನಿಗಿತ್ತು. ಹಾಗಾದರೆ ತಾನು ಸಾಲ ಮಾಡಬೇಕು. ಗುರುತು ಪರಿಚಯವಿಲ್ಲದ ಈ ಊರಿನಲ್ಲಿ ತನಗೆ ಸಾಲ ಕೊಡುವವರು ಯಾರು? ತನಗೀಗ ನೆರವಾಗುವವರೆಂದರೆ ರಾಯರು ಮಾತ್ರ ಅಂದುಕೊಂಡ ಆತ ಅರೆಕ್ಷಣದಲ್ಲಿ ನಿದ್ರಾದೇವಿಯೆದುರು ಸಂಪೂರ್ಣ ಮಂಡಿಯೂರಿದ್ದ.

 ಬೆಳಗ್ಗೆ ಯಾವತ್ತಿಗಿಂತ ತುಸು ಬೇಗನೆ ನಿದ್ರೆಯಿಂದೆದ್ದ ವಸಂತ, ಹೆಂಡತಿ ಕೊಟ್ಟ ಚಹಾದ ಲೋಟಕ್ಕೂ ಮುತ್ತಿಕ್ಕದೆ ರಾಯರ ಮನೆಯತ್ತ ಪಾದ ಬೆಳೆಸಿದ. ಬೆಂಗಳೂರೆಂಬ ರಾಕ್ಷಸ ಪಟ್ಟಣದಲ್ಲಿ ಆತನಿಗೆ ಆತ್ಮೀಯವಾಗಿದ್ದ ಏಕೈಕ ಜೀವವೆಂದರೆ, ಅದು ರಾಯರು. ರಾಯರೂ ಕೂಡ ವಸಂತನ ಹಳ್ಳಿಯವರೇ. ವಸಂತನ ತಂದೆ ಮತ್ತು ರಾಯರ ಸ್ನೇಹ ಬಲು ಗಾಢವಾದದ್ದು. ವಕೀಲರಾಗಿ ಪಟ್ಟಣ ಸೇರಿಕೊಂಡ ರಾಯರು ತಮ್ಮ ಊರಿನವರಿಗೆ ಅಪರೂಪದ ನಂಟನಾಗಿಬಿಟ್ಟಿದ್ದರು. ಹಾಗೆ ಬಂದಾಗ ವಸಂತನನ್ನು ಮಾತಾಡಿಸದೆ ಮರಳುತ್ತಿದ್ದುದೇ ಇಲ್ಲ. ವಸಂತನೂ ಕೂಡ ಅಷ್ಟೆ, ಬೆಂಗಳೂರಿಗೆ ಕಾಲಿಟ್ಟು ಮಾಡಿದ ಮೊದಲ ಕೆಲಸ ರಾಯರ ಮನೆಗೆ ಹೋಗಿ, ಮಾತಾಡಿಸಿ ಬಂದದ್ದು. ಬಿಡುವಿದ್ದಾಗಲೆಲ್ಲ ವಸಂತ ರಾಯರಲ್ಲಿಗೆ ಹೋಗುತ್ತಿದ್ದದ್ದುಂಟು.

 ವಸಂತ ಗೇಟಿಗೆ ಕೈಯಿಟ್ಟಾಗ ರಾಯರು ವರಾಂಡದಲ್ಲಿ ಪೇಪರ್ ಓದುತ್ತಾ ಕುಳಿತಿದ್ದರು. ಕೈಯಲ್ಲೊಂದು ಕಾಫಿ ಕಪ್. ಅದು ಅವರ ನಿತ್ಯದ ಭಂಗಿ. ವಸಂತನನ್ನು ಕಂಡ ರಾಯರ ಮುಖದಲ್ಲಿ ನಸುನಗು ಮೂಡಿತ್ತು. ‘‘ಏನು ವಸಂತ, ಇತ್ತೀಚೆಗೆ ನಮ್ಮ ಮನೆಗೆ ಬರುವುದೇ ಅಪರೂಪವಾಗಿಬಿಟ್ಟಿದೆ. ನನ್ನನ್ನು ಮರೆತೇಬಿಟ್ಟೆಯೋ ಹೇಗೆ?’’ ರಾಯರ ಕುಶಲೋಪರಿ ಆರಂಭವಾಗಿತ್ತು. ವಸಂತ ಮಾತನಾಡಲಿಲ್ಲ. ಆತನ ತಲೆತುಂಬಾ ಅನೇಕ ಯೋಚನೆಗಳು ಕಬಡ್ಡಿ ಆಡತೊಡಗಿದ್ದವು.

‘‘ಮತ್ತೇನು ಸಮಾಚಾರ?’’ ತನ್ನದೇ ಯೋಚನೆಯಲ್ಲಿ ಮೈಮರೆತಿದ್ದ ವಸಂತನಲ್ಲಿ ವಿಚಾರಿಸಿದ್ದರು ರಾಯರು.

 ‘‘ಏನಿಲ್ಲ, ನಾನು ಇಲ್ಲೇ ಪಕ್ಕದ ಏರಿಯಾದಲ್ಲಿ...’’ ವಸಂತನ ನಾಲಿಗೆ ಮುಂದೋಡಲು ಹಿಂದು ಮುಂದು ನೋಡಿತು. ಹೇಳದಿದ್ದರೆ ತನ್ನ ಕೆಲಸವಾಗಲಿಕ್ಕಿಲ್ಲ ಎಂದುಕೊಂಡವನೇ ಮಾತಿಗೆ ಎಕ್ಸಿಲೇಟರ್ ಕೊಟ್ಟ. ‘‘ಪಕ್ಕದ ಏರಿಯಾದಲ್ಲಿ ನಾನು ಭೂಮಿ ಖರೀದಿಸಿದ್ದೆ ರಾಯರೇ, ಎರಡು ವರ್ಷದ ಹಿಂದೆ. ಈಗ ಅಲ್ಲಿ ಮನೆ ಕಟ್ಟಿಸಬೇಕೂಂತ ಆಸೆಯಿದೆ. ಅದಕ್ಕೆ ನೀವೊಂದು ಐದು ಲಕ್ಷ ರೂಪಾಯಿ ಸಾಲ ಕೊಟ್ಟರೆ...’’

 ನಗು ತುಂಬಿಕೊಂಡಿದ್ದ ರಾಯರ ಮುಖ ನಿಧಾನವಾಗಿ ನಗುವುದಕ್ಕೆ ಜಿಪುಣತನ ತೋರಲಾರಂಭಿಸಿತು. ‘‘ಅದೂ ಸಾಲ ಕೊಡಬಹುದಿತ್ತು. ಆದರೆ ನನ್ನ ಮಗ ಆನಂದ, ಅದೇ ಅಮೆರಿಕದಲ್ಲಿದ್ದಾನಲ್ಲ, ಅವನು ಹಾಸ್ಪಿಟಲ್ ಕಟ್ಟಿಸುತ್ತಿದ್ದಾನೆ, ಅಮೆರಿಕದಲ್ಲಿಯೇ. ಕಡಿಮೆ ಅಂದರೂ ಐವತ್ತು ಲಕ್ಷದ ಖರ್ಚು. ನಾನೀಗ ನಿಂಗೆ ಹಣ ಕೊಡುವುದು ಹೇಗೆ? ನೀನೇ ಹೇಳು’’

 ವಸಂತನಿಗೆ ನಿರಾಶೆಯಾಗಿತ್ತು. ಲಗೋರಿ ಆಟದಲ್ಲಿ ಚೆಂಡಿನೇಟು ತಿಂದ ಹುಡುಗನಂತೆ ಮುಖ ಮಾಡಿಕೊಂಡು ನಿಂತ. ಒತ್ತಾಯಪಡಿಸಿದರೆ ಕೊಟ್ಟಾರೇನೋ ಎಂಬ ಆಸೆ ಮೂಡಿತು. ಆದರೆ ಆತನ ಸ್ವಾಭಿಮಾನ ಬೇಲಿ ಹಾರಲು ಒಪ್ಪಲೇ ಇಲ್ಲ. ರಾಯರಿಗೆ ಬಲವಂತದ ನಮಸ್ಕಾರ ಹೊಡೆದು ಗೇಟಿನ ಬಳಿಗೆ ತಲುಪಿದ್ದನಷ್ಟೇ, ರಾಯರು ಪತ್ನಿಯೊಂದಿಗೆ ಆಡುತ್ತಿದ್ದ ಮಾತುಗಳು ಅಸ್ಪಷ್ಟ ಧ್ವನಿಯಲ್ಲಿ ವಸಂತನಿಗೆ ಕೇಳಲಾರಂಭಿಸಿತು. ‘‘ಅಲ್ಲ, ಇವನಿಗೆ ಐದು ಲಕ್ಷ ಕೊಟ್ಟರೆ ವಾಪಸ್ಸು ಬರಲಿಕ್ಕಿದೆಯಾ? ಅದಕ್ಕಿಂತ ಹೊಳೆಗೆ ಹಾಕುವುದು ಒಳ್ಳೆಯದು. ಅದಕ್ಕೇ ನಾನು ಸುಳ್ಳು ಹೇಳಿದ್ದು’’

 ವಸಂತನಿಗೆ ತನ್ನ ಕಿವಿಯ ಕುರಿತೇ ವಿಪರೀತ ಅನುಮಾನ ಬಂದಂತಾಯಿತು. ಹಳ್ಳಿಯಲ್ಲಿದ್ದಾಗ ರಾಯರು ಹೀಗಿರಲಿಲ್ಲ. ಸುರಿದ ಭಾರೀ ಮಳೆಗೆ ವಸಂತನ ಮುರುಕಲು ಮನೆ ನೆಲಕಚ್ಚಿದಾಗ ರಾತ್ರೋರಾತ್ರಿ ಕೆಲಸದವರನ್ನು ಗೊತ್ತು ಮಾಡಿ, ಅವರ ಸಂಬಳವೆಲ್ಲಾ ಕೊಟ್ಟು ಮನೆ ನಿರ್ಮಿಸಿಕೊಟ್ಟದ್ದು ಇದೇ ರಾಯರು. ಆದರೆ ಈಗ? ಹಣವಿದ್ದೂ ಇಲ್ಲ ಅನ್ನುತ್ತಿದ್ದಾರಲ್ಲ! ಇದು ವಸಂತನಲ್ಲಿ ನಿಜಕ್ಕೂ ಬೇಸರ ಮೂಡಿಸಿತ್ತು. ಹಳ್ಳಿಯ ಗಡಿ ದಾಟಿದ ಮೇಲೆ ಹೀಗೂ ಬದಲಾದರೇ? ಮನೆಯತ್ತ ಮರಳುತ್ತಿದ್ದ ವಸಂತನ ಹೆಜ್ಜೆಗಳು ಭಾರವಾಗಿದ್ದವು.

*****

ಇದಾಗಿ ವಾರ ಕಳೆದಿತ್ತೇನೋ, ಕೆಲಸಕ್ಕೆ ಯಾವತ್ತಿನಂತೆ ಹೊರಟ ವಸಂತ ದಾರಿಮಧ್ಯೆಯೇ ಇದ್ದ ತನ್ನ ಭೂಮಿಯತ್ತ ನಡೆಯುತ್ತಲೇ ಕಣ್ಣು ಹಾಯಿಸಿದ. ಹತ್ತು- ಹನ್ನೆರಡು ಜನರ ತಲೆಗಳು ಕಂಡವು. ಸುಣ್ಣದ ಹುಡಿಯನ್ನು ನೆಲದ ಮೇಲೆಳೆಯುತ್ತಿದ್ದಾರೆ. ‘‘ನನ್ನ ಜಾಗದಲ್ಲಿ ನಿಮಗೆಲ್ಲಾ ಏನು ಕೆಲಸ?’’ ಸಹಜವಾಗಿಯೇ ದೊಡ್ಡ ಧ್ವನಿ ಆತನಿಂದ ಹೊರಬಂತು. ಹೊಕ್ಕುಳ ಕೆಳಗೆ ಮನೆ ಮಾಡಿಕೊಂಡಿದ್ದ ಆತಂಕದ ನೆರಳು ಆತನ ಮುಖ ದಲ್ಲಿಯೂ ಕಾಣಿಸಿಕೊಂಡಿತು.

‘‘ಹ್ಞೂ! ನಿನ್ನ ಜಾಗ? ನೋಡಿಲ್ಲಿ’’ ಚಿನ್ನದ ಕಡಗದ ಕೈ ದಾಖಲೆ ಪತ್ರಗಳನ್ನು ವಸಂತ ನೆದುರು ಹಿಡಿಯಿತು. ಪತ್ರಗಳ ಮೇಲೊಮ್ಮೆ ಕಣ್ಣಾಡಿಸಿದ ವಸಂತನಿಗೆ ಅದರಲ್ಲಿ ಏನು ಬರೆದಿದೆ ಯೆಂಬುದೇ ಅರ್ಥವಾಗಲಿಲ್ಲ.

‘‘ಇಲ್ಲ, ನನ್ನ ಹತ್ತಿರವೂ ಇದೇ ಥರದ ಪತ್ರಗಳಿವೆ. ನಾನು ಅದನ್ನು ತೆಗೆದುಕೊಂಡು ಪೊಲೀಸರ ಬಳಿಗೆ ಹೋಗುತ್ತೇನೆ’’ ವಸಂತನ ಮಾತಲ್ಲಿ ಹಠ ತುಂಬಿತ್ತು.

‘‘ಏಯ್, ಪೊಲೀಸರ ಬಳಿಗೆ ಒಮ್ಮೆ ಹೋಗಿ ಬಾ. ಅಷ್ಟರಲ್ಲಿ ನಮ್ಮ ಕೆಲಸವೆಲ್ಲಾ ಮುಗಿದಿ ರುತ್ತದೆ’’ ವಸಂತನನ್ನು ಲೆಕ್ಕಕ್ಕೇ ತೆಗೆದುಕೊಳ್ಳದವನಂತೆ ನುಡಿದ ಆತ ವಸಂತನ ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ತಳ್ಳಿದ. ನಾಲ್ಕೈದು ಬಲಿಷ್ಠ ಕೈ-ಕಾಲುಗಳು ವಸಂತನ ದೇಹದ ಮೇಲೆಲ್ಲಾ ಮನಬಂದಂತೆ ಓಡಾಡಿದವು.

‘‘ನ...ನ್ನ ತಾ.ಯಿ..ಅವಳ ಮ..ನೆ ನಾನು ಕಟ್ಟಬೇ..ಕು ಕಟ್ಟುತ್ತೇನೆ ಇದು ನ..ನ್ನಮ್ಮನ ಭೂ..ಮಿ’’ ಹೊಡೆತ- ತುಳಿತಗಳ ಮಧ್ಯೆಯೂ ವಸಂತನ ನಾಲಿಗೆ ಅರಚತೊಡಗಿತ್ತು. ಬೆವರಿಳಿಯುತ್ತಿದ್ದ ಮುಖ, ಮಣ್ಣು ಮೆತ್ತಿದ್ದ ಬಟ್ಟೆ, ಕುಂಟು ಕಾಲನ್ನೆಳೆಯುತ್ತಾ ಮನೆಯ ಕಡೆಗೆ ನಡೆಯತೊಡಗಿದ ವಸಂತ. ಈಗಲೇ ನನ್ನ ಹೆಂಡತಿಯಲ್ಲಿ ಈ ವಿಚಾರ ಹೇಳಬೇಕು. ನನಗೆ ಅವಳನ್ನು ಬಿಟ್ಟರೆ ಈ ಊರಲ್ಲಿ ಇನ್ಯಾರಿದ್ದಾರೆ? ನನಗೆ ಸಮಾಧಾನ ಹೇಳುವುದಿದ್ದರೆ ಅವಳೊಬ್ಬಳೇ- ವಸಂತನ ಮನಸ್ಸು ಹೀಗೆ ಯೋಚಿಸತೊಡಗಿತ್ತು. ಮೆಟ್ಟಿಲು ಹತ್ತುತ್ತಾ ಮನೆಬಾಗಿಲಿಗೆ ಬಂದ ವಸಂತನ ಕೈ ನಿಧಾನವಾಗಿ ಕಾಲಿಂಗ್‌ಬೆಲ್‌ನತ್ತ ಚಲಿಸಿತು. ಆತನ ಕೈ ಕಾಲಿಂಗ್‌ಬೆಲ್‌ನ್ನು ಅದುಮುವ ಮೊದಲೇ ಮನೆಯೊಳಗಿನಿಂದ ಹೊರಬರುತ್ತಿದ್ದ ಜೋಡಿ ನಗುವಿನ ಸದ್ದು ಆತನ ಕಿವಿಯನ್ನು ಸೇರಿತು. ಆ ನಗುವಿನೊಳಗೊಂದು ಮಾದಕತೆ. ಸಂಶಯದ ಭಾವವೊಂದು ವಸಂತನ ಮುಖದಲ್ಲಿ ಮೂಡಿತು. ಕಿಟಕಿಯ ಬಳಿಗೆ ಓಡಿದವನೇ, ಮನೆಯೊಳಗನ್ನು ನೋಡಿದ. ಹೆಂಡತಿಯ ನಗ್ನ ದೇಹ, ಸುಖಭರಿತ ನಗು, ಬೆತ್ತಲೆ ಎದೆಯಲ್ಲಿ ಪೋಲಿ ಕಾವ್ಯ ಬರೆಯುತ್ತಿರುವವನ ಕೈಗಳು- ವಸಂತನ ಕಣ್ಣಲ್ಲಿ ಭದ್ರವಾಗಿ ನೆಲೆಯೂರಿದವು.

‘‘ಹೋ! ತನ್ನ ಹೆಂಡತಿಯೂ ಇಂತಹವಳೇ? ಹಾಗಿದ್ದರೆ ಅವಳ ಪ್ರೀತಿ?’’

ಹಳ್ಳಿಯಲ್ಲಿದ್ದಾಗ ತನಗೆ ಸಹಾಯ ಮಾಡಿದ್ದ ರಾಯರು ನಗರಕ್ಕೆ ಬಂದ ಮೇಲೆ ಬದಲಾಗಿದ್ದಾರೆ. ತನ್ನ ಹೆಂಡತಿಯನ್ನೂ ಕೂಡ ನಗರ ಜೀವನ ಬದಲಾಯಿಸಿದೆಯಾ? ಹಾಗಾದರೆ ನಗರಕ್ಕೆ ಬಂದೂ ಬದಲಾಗದವನೆಂದರೆ ತಾನು ಮಾತ್ರವೇ? ನಗರಜೀವನಕ್ಕೆ ಹೊಂದಿಕೊಳ್ಳಲಾಗದ ತಾನು ಪರಕೀಯನೇ?

ಇಲ್ಲ, ನಗರಜೀವನದ ಸಹವಾಸವೇ ಸಾಕು. ಹಳ್ಳಿಗೆ ಮರಳುತ್ತೇನೆ. ಅಲ್ಲಿ ಕೂಲಿ ಮಾಡಿಯಾದರೂ ಬದುಕುತ್ತೇನೆ. ನಗರದಲ್ಲಿ ಪರಕೀಯನಾಗಿ ಬದುಕುವುದಕ್ಕಿಂತ ಹಳ್ಳಿಯವರೆಲ್ಲರ ಜೊತೆ ನಾನೂ ಒಬ್ಬನಾಗಿ ಬದುಕುತ್ತೇನೆ- ಹೀಗೆ ಯೋಚಿಸಿದ ವಸಂತ ಮೆಟ್ಟಿಲಿಳಿದು, ಗೇಟು ದಾಟಿ, ರಸ್ತೆಗೆ ಕಾಲಿಟ್ಟಿದ್ದನಷ್ಟೇ, ಓವರ್‌ಟೇಕ್ ಮಾಡುತ್ತಾ ಬಂದ ದುಬಾರಿ ಕಾರೊಂದು ವಸಂತನನ್ನು ನೆಲಕ್ಕಪ್ಪಳಿಸಿ, ನಿಲ್ಲದೆಯೇ ಮುಂದಕ್ಕೆ ಸಾಗಿತು. ಚರಂಡಿ ಸಮೀಪಕ್ಕೆ ಬಂದು ಬಿದ್ದ ವಸಂತ ಒಂದರೆಕ್ಷಣ ಒದ್ದಾಡಿ ಚಲನೆ ಮರೆಯಿತು. ನಗರಜೀವನ ನಿರಾತಂಕವಾಗಿ ಸಾಗತೊಡಗಿತ್ತು, ಪರಕೀಯನೊಬ್ಬನ ಸಾವಿನ ಪ್ರಜ್ಞೆಯೇ ಇಲ್ಲದೆ...

Writer - ವಿಶ್ವನಾಥ ಎನ್. ನೇರಳಕಟ್ಟೆ

contributor

Editor - ವಿಶ್ವನಾಥ ಎನ್. ನೇರಳಕಟ್ಟೆ

contributor

Similar News