ನಿರಂತರ ಕಲಿಕೆ ಇಲ್ಲದಿದ್ದರೆ ಗಳಿಸಿದ್ದೆಲ್ಲ ವ್ಯರ್ಥ: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ ಕುಮಾರ್
ಬೆಂಗಳೂರು, ಮೇ 11: ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು, ನಿರಂತರ ಪರಿಶ್ರಮ ಮತ್ತು ಕಲಿಕೆಯ ಮನೋಭಾವನೆ ಮೈಗೂಡಿಸಿಕೊಳ್ಳದಿದ್ದರೆ ಭವಿಷ್ಯದ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನಿನ್ನೆ ಕಲಿತ ಜ್ಞಾನವನ್ನು ಇಂದು ವೃದ್ದಿಸಿಕೊಳ್ಳಬೇಕು. ಪ್ರತಿ ಹಂತದಲ್ಲೂ ಅಪ್‌ಡೇಟ್ ಆಗುತ್ತಲೇ ಇರಬೇಕು ಎಂದರು.
ಈ ಹಿಂದೆ ಕಲಿತಿದ್ದರೆ ಅದರ ಆಯುಷ್ಯ 10ರಿಂದ 15ವರ್ಷಗಳಷ್ಟು ಇರುತ್ತಿತ್ತು. ಇದೀಗ ಕಲಿತ ವಿದ್ಯೆಯ ಅವಧಿ ಕಡಿಮೆಯಾಗುತ್ತಲೇ ಇದೆ. ಬೇರೆ-ಬೇರೆ ಕೋರ್ಸ್‌ಗಳಲ್ಲಿ ತನ್ನ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಂಶೋಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದ ಅವರು ಹೇಳಿದರು.
ಇಸ್ರೋ ಸಂಸ್ಥೆಯನ್ನಿಂದು ಇಡೀ ಜಗತ್ತು ಕೊಂಡಾಡುತ್ತಿದೆ. ಚಂದ್ರನ ಮೇಲೆ ನೀರಿನ ಕಣಗಳು ಹೇಗೆ ನಿರ್ಮಾಣವಾಗುತ್ತಿವೆ ಎನ್ನುವ ಮಾಹಿತಿ ಪತ್ತೆ ಮಾಡಿದ್ದು ಭಾರತ. ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿ ಪ್ರಥಮ ಬಾರಿಗೆ ಯಶಸ್ಸು ಸಾಧಿಸಿದ್ದು ಭಾರತ. ಕೇವಲ ಏಳು ಉಪಗ್ರಹಗಳ ಸಮೂಹದಿಂದ ನಾವು ನಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ಮೂಲಕ ಎಲ್ಲಿದ್ದೇವೆ ಎಂಬ ಮಾಹಿತಿ ಗೊತ್ತಾಗುತ್ತದೆ. ಸಮುದ್ರದ ಸುತ್ತಮುತ್ತಲ ಏಳುವರೆ ಸಾವಿರ ಕಿ.ಮೀ.ದೂರದವರೆಗೆ ಎಲ್ಲಿದ್ದೇವೆ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಮೀನುಗಾರರಿಗೆ ಮಾತೃಭಾಷೆಯಲ್ಲಿ ಹವಾಮಾನ ವೈಪರೀತ್ಯದ ಬಗ್ಗೆಯೂ ವಿವರ ನೀಡಲಾಗುತ್ತಿದೆ. ಸಮುದ್ರದ ಅಲೆಗಳಲ್ಲಿ ಏರುಪೇರಾದರೆ ಜಲಸಾಗರ ವಲಯದಲ್ಲಿ ಅಂತರ್‌ರಾಷ್ಟ್ರೀಯ ಗಡಿಭಾಗಕ್ಕೆ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿ ಎನ್ನುವುದನ್ನು ಹೇಳಲು ಈ ಉಪಗ್ರಹ ತಂತ್ರಜ್ಞಾನ ಸಹಕಾರಿ ಎಂದರು.
ಇತ್ತೀಚೆಗೆ ಅಪ್ಪಳಿಸಿದ ಫೋನಿ ಚಂಡಮಾರುತ ಯಾವ ಪ್ರದೇಶಕ್ಕೆ ಅಪ್ಪಳಿಸಲಿದೆ ಎನ್ನುವ ಮುನ್ಸೂಚನೆ ನೀಡಿದ ಪರಿಣಾಮ ಅತ್ಯಂತ ಸಮರ್ಥವಾಗಿ ಅಪಾಯದ ಸ್ಥಳದಿಂದ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವಾಯಿತು. ನಮ್ಮ ದೇಶಕ್ಕಾಗಿ ನಭೋಮಂಡಲದಲ್ಲಿ 50 ಉಪಗ್ರಹಗಳು ಕೆಲಸ ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಜಿ.ದಯಾನಂದ್, ಕಾರ್ಯಕಾರಿ ನಿರ್ದೇಶಕ ಡಿ.ಜಿ.ಮನೋಜ್, ಪ್ರಾಂಶುಪಾಲ ಡಾ.ಕೆ.ಎಲ್. ಶಿವಬಸಪ್ಪ, ಆಡಳಿತಾಧಿಕಾರಿ ಡಾ.ಕೆ.ಆರ್.ನಾಗಭೂಷಣ್, ಡಾ.ವೆಂಕಟೇಶಪ್ಪ ಹಾಜರಿದ್ದರು.