ರೆಸಾರ್ಟ್ ನಲ್ಲಿ ಸಿಎಂ ಮೋಜು-ಮಸ್ತಿ ಆರೋಪಿಸಿ ಕಸಂಒ ಪ್ರತಿಭಟನೆ

Update: 2019-05-11 14:52 GMT

ಬೆಂಗಳೂರು, ಮೇ 11: ಉತ್ತರ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯಲೂ ನೀರಿಲ್ಲದೆ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿಗಳು ಉಡುಪಿ, ಮಡಿಕೇರಿ ರೆಸಾರ್ಟ್‌ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಚಾಲುಕ್ಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಬೀಗ ಹಾಗೂ ಸರಪಳಿ ತಂದು ವಿಧಾನಸೌಧದ ಗೇಟ್‌ಗೆ ಬೀಗ ಹಾಕಲು ಯತ್ನಿಸಿದರು. ಆದರೆ, ದಾರಿ ಮಧ್ಯದಲ್ಲೇ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದು ನಾಗೇಶ್ ಸೇರಿದಂತೆ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಒಕ್ಕೂಟದ ಅಧ್ಯಕ್ಷ ನಾಗೇಶ್ ಮಾತನಾಡಿ, ಚುನಾವಣೆ ಮುಗಿದ ಮೇಲೆ ಸಿಎಂ ರಾಜ್ಯದಲ್ಲಿ ಆಗಬೇಕಾದ ಕೆಲಸ ಮಾಡುತ್ತಿಲ್ಲ. ಅದು ಬಿಟ್ಟು ರೆಸಾರ್ಟ್‌ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಉಡುಪಿಯಲ್ಲಿ ರೆಸಾರ್ಟ್ ವಾಸ್ತವ್ಯ ಆಯ್ತು, ಈಗ ಮಡಿಕೇರಿಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ರೆಸಾರ್ಟ್‌ಗೆ ಹೋಗುತ್ತಾರೆ. ಇಲ್ಲ ದೇವಸ್ಥಾನಕ್ಕೆ ಹೋಗುತ್ತಾರೆ. ಉತ್ತರ ಕರ್ನಾಟಕದಲ್ಲಿ ಜನರು ನೀರಿಲ್ಲದೇ ಒದ್ದಾಡುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಳೆ ಬಂದರೆ ಜನರ ಜೀವನ ಅಸ್ತವ್ಯಸ್ತವಾಗುತ್ತದೆ. ಜನರ ಕಷ್ಟ ಕೇಳಬೇಕಾದವರು ರೆಸಾರ್ಟ್‌ಗೆ ಹೋಗಿದ್ದಾರೆ. ಹೀಗಿದ್ದಾಗ ವಿಧಾನಸೌಧ ಯಾಕೆ ಬೇಕು? ವಿಧಾನಸೌಧಕ್ಕೆ ಬೀಗ ಹಾಕೋಕೆ ಬಂದಿದ್ದೀವಿ. ಸಿಎಂ ಕುಮಾರಸ್ವಾಮಿಗೆ ನೈತಿಕತೆ ಇದ್ದರೆ ರೆಸಾರ್ಟ್ ಬಿಟ್ಟು ವಿಧಾನಸೌಧಕ್ಕೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News