ಮೈಸೂರು ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿ ಮತ್ತೆ ಆರಂಭ: ಎರಡು ತಿಂಗಳಲ್ಲಿ ಪೂರ್ಣ

Update: 2019-05-11 14:58 GMT

ಬೆಂಗಳೂರು, ಮೇ 11: ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೈಸೂರು ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿ ಮತ್ತೆ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ತಿಂಗಳು ಬೇಕಾಗಲಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಹಾಗಾಗಿ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವುದು ಸೂಕ್ತವಾಗಿದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುವ ಮಾರ್ಗದಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಗೋರಿಪಾಳ್ಯ ಜಂಕ್ಷನ್ ಕಡೆಗೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಈ ಕಾಮಗಾರಿಯಿಂದ 1-2 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಆಗುತ್ತಿದೆ. ಎಡ ಬದಿ ರಸ್ತೆಯ ಅರ್ಧ ಭಾಗಕ್ಕೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಉಳಿದರ್ಧ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಒಂದು ಬಸ್ ಚಲಿಸುವಷ್ಟು ಜಾಗವಿದ್ದು, ನಿತ್ಯ ವಾಹನಗಳು ಕಿ.ಮೀ ಗಟ್ಟಲೇ ಸಾಲುಗಟ್ಟಿ ನಿಲ್ಲುವಂತಾಗಿದೆ.

ನಾಯಂಡಹಳ್ಳಿ ಕಡೆಯಿಂದ ಸಿಸಿಬಿ ಕಚೇರಿ ಜಂಕ್ಷನ್‌ವರೆಗೆ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಂಡಾಗಲೂ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಆಗಲೂ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡದೆ, ಜನರು ತೊಂದರೆ ಅನುಭವಿಸುವಂತೆ ಮಾಡಿದ್ದರು. ಈಗಲೂ ಅದೇ ಸ್ಥಿತಿಯನ್ನು ತಂದೊಡ್ಡಲಾಗಿದೆ.

ಮೆಜೆಸ್ಟಿಕ್ ಕಡೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಟನ್‌ಪೇಟೆ ಮುಖ್ಯರಸ್ತೆಯನ್ನು ಟೆಂಡರ್‌ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಕಾಮಗಾರಿ ಮುಗಿಯಲು 8 ತಿಂಗಳು ಹಿಡಿಯಲಿದೆ.

ಮೈಸೂರು ರಸ್ತೆಯಲ್ಲಿ ಪ್ರತಿದಿನವೂ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ಮೈಸೂರಿನಿಂದ ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳಿಗೆ ಈ ರಸ್ತೆಯೇ ಪ್ರಮುಖ ಮಾರ್ಗ. ರಸ್ತೆಗೆ ಹೊಂದಿಕೊಂಡಿರುವ ಪ್ರದೇಶಗಳ ಜನರು ಸಹ ಸಂಚಾರಕ್ಕೆ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಕಾಮಗಾರಿಗಾಗಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ವಾಹನ ಸವಾರರು 2 ತಿಂಗಳ ಕಾಲ ದಟ್ಟಣೆಯ ನರಕವ್ಯೂಹದಲ್ಲಿ ಸಿಲುಕಿ ಹಾಕಿಕೊಂಡು ಒದ್ದಾಡಬೇಕಿದೆ.

ಕೆ.ಆರ್.ಮಾರುಕಟ್ಟೆಯಿಂದ ಬಿಎಚ್‌ಇಎಲ್‌ವರೆಗಿನ 4.80 ಕಿ.ಮೀ ಉದ್ದದವರೆಗಿನ ರಸ್ತೆಗೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಈಗಾಗಲೇ ಬಿಎಚ್‌ಇಎಲ್‌ನಿಂದ ಸಿಸಿಬಿ ಕಚೇರಿಯ ಜಂಕ್ಷನ್‌ವರೆಗೆ ಒಂದು ಬದಿಯಲ್ಲಿ 8 ತಿಂಗಳ ಹಿಂದೆಯೇ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದೀಗ ಮತ್ತೊಂದು ಬದಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.

2 ತಿಂಗಳಲ್ಲಿ ಕಾಮಗಾರಿ ಪೂರ್ಣ: ಸದ್ಯ ಸ್ಯಾಟಲೈಟ್‌ನಿಂದ ಗುಡ್ಡದಹಳ್ಳಿ ಸಿಗ್ನಲ್‌ವರೆಗೆ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಗೋರಿಪಾಳ್ಯ ಜಂಕ್ಷನ್‌ವರೆಗಿನ 2 ಕಿ.ಮೀ ಮಾರ್ಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮೈಸೂರು ರಸ್ತೆಯ ಒಂದು ಭಾಗವು 10-11 ಮೀಟರ್‌ನಷ್ಟು ಅಗಲಿವೆ. ಈ ಪೈಕಿ 9.5 ಮೀಟರ್ ಅಗಲದಷ್ಟು ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಸ್ತೆಯ ಒಂದು ಭಾಗದ ನಾಲ್ಕೂವರೆ ಮೀಟರ್ ಅಗಲಕ್ಕೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಉಳಿದ ಅರ್ಧ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಸ್ತೆಯ ಅರ್ಧ ಭಾಗದಲ್ಲಿ 15 ದಿನದಲ್ಲಿ ವೈಟ್‌ಟಾಪಿಂಗ್ ಕೆಲಸ ಮುಗಿಯುತ್ತದೆ. ನಂತರ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗುವುದು. ಆ ಬಳಿಕ ಉಳಿದ ಭಾಗದ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ಪರ್ಯಾಯ ಮಾರ್ಗ

* ನಾಗರಬಾವಿ, ವಿಜಯನಗರ, ಗೋವಿಂದರಾಜನಗರದತ್ತ ಸಾಗುವವರು ಮಾಗಡಿ ರಸ್ತೆ, ಟೋಲ್‌ಗೇಟ್ ಮೂಲಕ ಸಂಚರಿಸಬಹುದು.

* ದ್ವಿಚಕ್ರ ವಾಹನ ಹಾಗೂ ಆಟೊದಲ್ಲಿ ಸಾಗುವವರು ಗೋರಿಪಾಳ್ಯದ ಮೂಲಕ ವಿಜಯನಗರ, ಹಂಪಿನಗರ ಕಡೆ ಸಾಗಬಹುದು.

* ಕಾರ್ಪೋರೇಷನ್, ಕೆ.ಆರ್.ಮಾರುಕಟ್ಟೆಯಿಂದ ಮೈಸೂರು ಕಡೆಗೆ ತೆರಳುವವರು ಚಾಮರಾಜಪೇಟೆ, ರಾಮಕಷ್ಣ ಆಶ್ರಮ, ಹನುಮಂತನಗರ 50 ಅಡಿ ರಸ್ತೆ ಮಾರ್ಗವಾಗಿ ನಾಯಂಡಹಳ್ಳಿ ಜಂಕ್ಷನ್ ತಲುಪಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News