ಮಹಿಳಾ ಶೋಷಣೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಕಲಾಕೃತಿಗಳು ಯಶಸ್ವಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-05-11 15:47 GMT
Editor : 

ಬೆಂಗಳೂರು ಮೇ 11: ಕಲಾವಿದ ಹಾಗೂ ಕಲಾಶಿಕ್ಷಕ ಪ್ರೊ.ಕೆ.ಎಸ್.ಅಪ್ಪಾಜಯ್ಯ ಅವರ ಏಕವ್ಯಕ್ತಿ ಕಲಾಪ್ರದರ್ಶನ ಹಿಂದಿನ ಕಾಲದ ಮಹಿಳಾ ಅಸಮಾನತೆ ಹಾಗೂ ಶೋಷಣೆಗಳ ಮೇಲೆ ಬೆಳಕು ಚೆಲ್ಲುತ್ತಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. 

ನಗರದ ಆರ್ಟ್ ಹೌಸ್‌ನಲ್ಲಿ ಆಯೋಜಿಸಲಾಗಿರುವ ಏಕವ್ಯಕ್ತಿ ಕಲಾಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೊ.ಕೆ.ಎಸ್.ಅಪ್ಪಾಜಯ್ಯ ನೂತನ ರೀತಿಯಲ್ಲಿ ತಮ್ಮ ಗ್ರಹಿಕೆಯನ್ನು ಕೃತಿಗೆ ಇಳಿಸಿದ್ದಾರೆ. ಗ್ಯಾಲರಿಯ ನೆಲದ ಮೇಲೆ ಮೊಣಕಾಲೆತ್ತರದ ಮಣ್ಣು, ಚಾರ್ಕೋಲ್ ರೇಖಾಚಿತ್ರಗಳು ಸ್ತ್ರೀವಾದದ ನಿರೂಪಣೆಯ ಅಂಶಗಳನ್ನು ವ್ಯಾಖ್ಯಾನಕ್ಕೆ ಒಡ್ಡುವಂತೆ ನಿರೂಪಿಸಲಾಗಿದೆ ಎಂದರು.

ಹಿರಿಯ ಕಲಾವಿದ ಎಸ್.ಜಿ.ವಾಸುದೇವ್ ಮಾತನಾಡಿ, ಕಲಾವಿದ ಹಾಗೂ ಕಲಾಶಿಕ್ಷಕ ಪ್ರೊ.ಕೆ.ಎಸ್.ಅಪ್ಪಾಜಯ್ಯ ಅವರ ಕಾಲಬದ್ದ ಹಾಗೂ ಲಿಂಗಸಂಬಂಧಿತ ಕಲಾಕೃತಿಯು ಸ್ತ್ರೀವಾದದ ನಿರೂಪಣೆಯ ಅಂಶಗಳನ್ನು ವ್ಯಾಖ್ಯಾನಕ್ಕೆ ಒಡ್ಡುತ್ತವೆ. ಗ್ರಾಮೀಣ ಸವದತ್ತಿಯ ಆಚರಣೆಯಲ್ಲಾಗಲಿ ಅಥವಾ ನಗರೀಕೃತ ಕಾಮಾಟಿಪುರದ ದೇಹಮಾರಾಟದ ವ್ಯವಹಾರದಲ್ಲಿರಲಿ, ಹೆಣ್ಣನ್ನು, ಹೆಣ್ಣೆಂಬ ಪರಿಕಲ್ಪನೆಯನ್ನು ದೈಹಿಕ ಆಚರಣೆ ಮತ್ತು ಆರ್ಥಿಕ ಲಾಭದ ಉದ್ದೇಶದಿಂದ ನಿರಂತರವಾಗಿ ಶೋಷಿಸಲಾಗುತ್ತಿದೆ ಎಂದರು.

ಕಲಾವಿದ ಕೆ.ಎಸ್.ಅಪ್ಪಾಜಯ್ಯ ಮಾತನಾಡಿ, ಗೋಡೆಯ ಮೇಲೆ ನೇರವಾಗಿ ಬರೆಯಲಾಗಿರುವ ಸ್ತ್ರೀತನವ ಕುರಿತಾದ ಚಾರ್ಕೋಲ್ ರೇಖಾಚಿತ್ರಗಳು, ಗ್ಯಾಲರಿಯ ನೆಲದ ಮೇಲೆ ಸಂಯೋಜಿಸಲಾದ ಮಣ್ಣಿನ ವಿನ್ಯಾಸ, ರೆಡಿಮೇಡ್ ಗುಣದ ಸೀರೆಬಟ್ಟೆ, ಪುರುಷ ಜನನಾಂಗದ ಪುನರಾವೃತ್ತ ಶಿಲ್ಪಗಳು, ಇವೆಲ್ಲವೂ ಜೆಂಡರ್- ರಾಜಕಾರಣ ಕುರಿತಾದ ವ್ಯಕ್ತಿಗತ ಏಕಚಿತ್ರ ನಿರ್ಮಿತಿಯಾಗಿದೆ ಎಂದರು. ಈ ಕಲಾಪ್ರದರ್ಶನ ಮೇ 12 ರಿಂದ ಮೇ 15 ರವರೆಗೆ ನಡೆಯಲಿದೆ.

Writer - ವ

contributor

Editor - ವ

contributor

Similar News