ಅರ್ಕಾವತಿ ಲೇಔಟ್ ಹಗರಣ: ಬಿಡಿಎಯ 7 ಸಿಬ್ಬಂದಿ ವಜಾ
ಬೆಂಗಳೂರು, ಮೇ 11: ಅರ್ಕಾವತಿ ಲೇ ಔಟ್‌ನಲ್ಲಿ ಮನಸೋ ಇಚ್ಛೆ ದರಕ್ಕೆ ಹಲವು ನಿವೇಶನಗಳನ್ನು ಮಾರಾಟ ಮಾಡಿದ್ದಕ್ಕೆ ಮೂವರು ಕೆಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಗೆ ಪತ್ರ ಬರೆದಿದೆ.
ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಿಡಿಎ ಕೂಡ ನಾಲ್ವರು ಕೇಸ್ ವರ್ಕರ್ಸ್ ಮತ್ತು ಮೂವರು ಮೇಲ್ವಿಚಾರಕರನ್ನು ಸೇವೆಯಿಂದ ವಜಾಗೊಳಿಸಿದೆ. ಬಿಡಿಎ ಕಾರ್ಯಪಡೆಯ ಸೂಪರಿಂಟೆಂಡೆಂಟ್ ತಮ್ಮ ತನಿಖಾ ವರದಿಯನ್ನು ಬಿಡಿಎ ಕಾರ್ಯದರ್ಶಿಗಳು ಮತ್ತು ಆಯುಕ್ತರಿಗೆ ಇತ್ತೀಚೆಗೆ ಸಲ್ಲಿಸಿದ್ದರು.
ಬಿಡಿಎ ಅಧಿಕಾರಿಯೊಬ್ಬರು ತಿಳಿಸಿರುವಂತೆ ಈ ಹಗರಣದಿಂದ ಬಿಡಿಎಗೆ ಸುಮಾರು 35 ಕೋಟಿ ರೂಪಾಯಿ ನಷ್ಟವಾಗಿದೆ. ಹಗರಣ ಬೆಳಕಿಗೆ ಬಂದ ಸಮಯದಲ್ಲಿ 10ರಿಂದ 15 ಕೋಟಿ ರೂಪಾಯಿ ನಷ್ಟವಾಗಿತ್ತು ಎಂದು ಹೇಳಲಾಗಿತ್ತು.
ಬಿಡಿಎಯ ಉಪ ಕಾರ್ಯದರ್ಶಿ ಸತೀಶ್ ಬಾಬು ತನ್ನ ಹುದ್ದೆಯಲ್ಲಿ ಮುಂದುವರಿದಿದ್ದು, ಬಿಡಿಎ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ. ಅವರ ವಿರುದ್ಧ ಮತ್ತು ಇಬ್ಬರು ಮಾಜಿ ಉಪ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.