×
Ad

ನಗರದಲ್ಲಿ ಅಕ್ರಮ ವಾಸ ಪ್ರಕರಣ: ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕ್ ದಂಪತಿ ವಾಘಾ ಗಡಿಯತ್ತ

Update: 2019-05-11 22:15 IST

ಬೆಂಗಳೂರು, ಮೇ 11: ನಗರದಲ್ಲಿ ಅಕ್ರಮವಾಗಿ ನೆಲೆಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ದಂಪತಿಯನ್ನು, ಹೈಕೋರ್ಟ್ ನಿರ್ದೇಶನದಂತೆ ವಾಘಾ ಗಡಿಗೆ ಬಿಟ್ಟು ಬರಲು ಕುಮಾರಸ್ವಾಮಿ ಲೇಔಟ್ ಪೊಲೀಸರು ಶುಕ್ರವಾರ ತಡ ರಾತ್ರಿ ರೈಲಿನಲ್ಲಿ ಹೊರಟರು. ದಂಪತಿಯನ್ನು ಕರೆದುಕೊಂಡು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿದ್ದ ಇನ್‌ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡ, ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಸದಿಯಲ್ಲಿಯತ್ತ ಪ್ರಯಾಣ ಬೆಳೆಸಿತು. 

ಹೊಸದಿಲ್ಲಿಯಿಂದ ವಾಘಾ ಗಡಿಗೆ ತೆರಳಲಿರುವ ತಂಡ, ಪಾಕಿಸ್ತಾನದ ಅಧಿಕಾರಿಗಳಿಗೆ ದಂಪತಿಯನ್ನು ಹಸ್ತಾಂತರಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಕರಣವೇನು: ಕರಾಚಿ ಜಿಲ್ಲೆಯ ಚಕ್ರಘೋತ್‌ನ ಕಾಸಿಫ್ ಶಂಸುದ್ದೀನ್(30) ಮತ್ತು ಕಿರಣ್ ಗುಲಾಂ ಅಲಿ(30) ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಅಕ್ರಮವಾಗಿ ನೆಲೆಸಿದ್ದ ಇವರನ್ನು ಕುಮಾರಸ್ವಾಮಿ ಲೇಔಟ್ ಮತ್ತು ಬನಶಂಕರಿ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಹಾಗೂ ವಿದೇಶಿಯರ ಕಾಯ್ದೆ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ 44ನೆ ಎಸಿಎಂಎಂ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ 21 ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಅಂತೆಯೇ 60 ಸಾವಿರಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿತ್ತು. 21 ತಿಂಗಳ ಜೈಲು ಶಿಕ್ಷೆಯನ್ನು ಪ್ರತ್ಯೇಕವಾಗಿ ಅನುಭವಿಸಬೇಕೆಂದು ಆದೇಶಿಸಿತ್ತು. ಅರ್ಜಿದಾರ ದಂಪತಿ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News