ಮಾವು ನಿಗಮದಿಂದ ‘ಮ್ಯಾಂಗೊ ಪಿಕ್ಕಿಂಗ್ ಟೂರ್’: ಮೇ 19 ರಂದು ಚಾಲನೆ

Update: 2019-05-11 16:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 11: ಮಾವಿನ ತೋಟಗಳಿಗೆ ಖುದ್ದು ಗ್ರಾಹಕರೇ ತೆರಳಿ ತಮಗೆ ಬೇಕಾದ ತಳಿಯ ಗುಣಮಟ್ಟದ ಮಾವನ್ನು ತಾವೇ ಕಿತ್ತು ಖರೀದಿಸಿ ತರುವ ‘ಮ್ಯಾಂಗೊ ಪಿಕ್ಕಿಂಗ್ ಟೂರಿಸಂ’ ಅನ್ನು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ಆಯೋಜಿಸಲಾಗುತ್ತಿದೆ.

ಮಾರಾಟ ಮಳಿಗೆಯಲ್ಲಿ ಉತ್ತಮ ಮಾವಿನ ಹಣ್ಣನ್ನು ಆರಿಸಿ ಖರೀದಿಸಿ ತರುವಂತೆ, ನಿಮಗೆ ಬೇಕಾದ ಗುಣಮಟ್ಟದ ಮಾವನ್ನು ನೇರವಾಗಿ ತೋಟದಲ್ಲೇ ಕಿತ್ತು ಮನೆಗೊಯ್ಯುವುದು ಈ ‘ಮ್ಯಾಂಗೊ ಪಿಕ್ಕಿಂಗ್ ಟೂರ್’ನ ಪ್ರಮುಖ ಉದ್ದೇಶವಾಗಿದೆ.

ಮಾರುಕಟ್ಟೆಯಲ್ಲಿ ಮಾವು ಖರೀದಿಸುವಾಗ ರಾಸಾಯನಿಕ ಬಳಸಿದ ಮಾವು ಇರುತ್ತದೆ ಎಂಬ ಭೀತಿಯಿಂದಲೇ ಹಣ್ಣು ಖರೀದಿಸುತ್ತೀರಿ. ಹಲವು ಬಾರಿ ಕೃತಕವಾಗಿ ಮಾಗಿಸಿದ ಹಣ್ಣು ರುಚಿ ಇರುವುದಿಲ್ಲ. ಇದರಿಂದ ಸಾಕಷ್ಟು ಬೇಸರವೂ ಆಗಿರುತ್ತದೆ. ಆದರೆ ಈ ಬೇಸರವನ್ನು ದೂರ ಮಾಡಿ ತೋಟದಲ್ಲೇ ಗುಣಮಟ್ಟದ ಮಾವಿನ ಹಣ್ಣನ್ನು ಕಿತ್ತು ತಂದು ನಿರ್ಭೀತಿಯಿಂದ, ಸಂತೃಪ್ತಿಯಾಗುವಂತೆ ಸವಿಯುವ ಅವಕಾಶವನ್ನು ಈ ಟೂರ್ ಕಲ್ಪಿಸಲಿದೆ. ಜತೆಗೆ ಈ ಮೂಲಕ ಮಾವು ಬೆಳೆ ಹೇಗಿರುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ. ನಾಗರಾಜ್ ಹೇಳುತ್ತಾರೆ.

ಟೂರ್‌ಗಾಗಿ ಗ್ರಾಹಕರನ್ನು ಕರೆತರುವಂತೆ ರಾಮನಗರದ ರೈತರು ನಿಗಮಕ್ಕೆ ತಿಳಿಸಿದ್ದಾರೆ. ಹೀಗಾಗಿ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಈಗಾಗಲೇ ಮಾವು ಮಂಡಳಿಯ ವೆಬ್‌ಸೈಟ್‌ನಲ್ಲಿ ನೋಂದಣಿ ಆರಂಭಗೊಂಡಿದ್ದು, ಹಲವರು ನೋಂದಣಿಯೂ ಮಾಡಿಕೊಂಡಿದ್ದಾರೆ.

ಮ್ಯಾಂಗೊ ಪಿಕ್ಕಿಂಗ್ ಟೂರ್ ಅಂದರೇನು?: ನಿಗಮವು ಬೆಂಗಳೂರಿನಿಂದ ಸಾರ್ವಜನಿಕರನ್ನು ನಾನಾ ಜಿಲ್ಲೆಗಳಲ್ಲಿನ ಮಾವು ತೋಟಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಗಳಲ್ಲಿ ಕರೆದೊಯ್ಯುತ್ತಾರೆ. ಹೀಗೆ ಕರೆದೊಯ್ದವರನ್ನು ಬೆಳಗ್ಗೆ ಮಾವು ತೋಟಕ್ಕೆ ಬಿಡಲಾಗುವುದು. ಗ್ರಾಹಕರು ತಮಗೆ ಇಷ್ಟಬಂದಷ್ಟು ಮಾವನ್ನು ಕಿತ್ತು ಖರೀದಿಸಬಹುದು. ತಮ್ಮ ಆಯ್ಕೆಯ ಹಣ್ಣುಗಳನ್ನು ಕಿತ್ತು ತರಬಹುದು. ಸಾಮಾನ್ಯವಾಗಿ ಅಂಗಡಿಯಿಂದ ತಂದ ಹಣ್ಣುಗಳನ್ನು ಒಂದೆರಡು ದಿನದಲ್ಲಿ ತಿಂದು ಮುಗಿಸಬೇಕು. ಇಲ್ಲದಿದ್ದರೆ ಹಣ್ಣು ಹಾಳಾಗುವ ಸಾಧ್ಯತೆಯಿರುತ್ತದೆ. ಆದರೆ ತೋಟದಲ್ಲಿ ಪಕ್ವವಾದ ಕಾಯಿಗಳನ್ನು ಕಿತ್ತು ತರುವುದರಿಂದ ಹೆಚ್ಚು ಕಾಲ ಇಡಬಹುದು.

ಹೆಸರು ನೋಂದಾಯಿಸಬೇಕು

ಟೂರ್‌ಗೆ ಹೋಗುವವರು ನಿಗಮದ ವೆಬ್‌ಸೈಟ್ www.ksmdmcl.org ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿಯೊಂದಿಗೆ ಮುಂಚಿತವಾಗಿ 100 ರೂ.ಗಳ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬೇಕು. ಈಗಾಗಲೇ ನೋಂದಣಿ ಆರಂಭಗೊಂಡಿದೆ.

ಎಲ್ಲಿಗೆ ಟೂರ್?

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲದಲ್ಲಿ ಒಬ್ಬ ರೈತರ ತೋಟ(97414 14033) ಹಾಗೂ ಬಿಲಗುಂಬ ಗ್ರಾಮದ ಮತ್ತೊಂದು ತೋಟ(99644 57181)ಕ್ಕೆ ಕರೆದೊಯ್ಯಲಾಗುವುದು. ಅದರ ಜತೆಗೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡಮಗಳೂರು(9141711274) ಗ್ರಾಮಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಈ ಗ್ರಾಮಗಳಲ್ಲಿನ ತೋಟಗಳಿಂದ ಮಾವು ಕಿತ್ತು, ಖರೀದಿ ಮಾಡಬಹುದು.

-ಒಂದು ಬಾರಿ ಕಟ್ಟಿದ ಹಣ ವಾಪಸ್ಸು ನೀಡುವುದಿಲ್ಲ.

-ಗ್ರಾಹಕರು ಗರಿಷ್ಠ 10 ಕೆ.ಜಿ.ಯಷ್ಟು ಮಾವನ್ನು ಖರೀದಿಸಬಹುದು.

-ಗ್ರಾಹಕರು ಐಡಿಯನ್ನು ಕಡ್ಡಾಯವಾಗಿ ತರಬೇಕು.

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News