ಬಿಬಿಎಂಪಿ ಶಾಲೆಗಳಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಸ್ಯಾಟಲೈಟ್ ಆಧಾರಿತ ಶಿಕ್ಷಣ

Update: 2019-05-11 16:54 GMT

ಬೆಂಗಳೂರು, ಮೇ 11: ನಗರದ ಬಿಬಿಎಂಪಿ ಶಾಲೆಗಳಲ್ಲಿ ರೋಶಿನಿ ಯೋಜನೆ ಅಡಿಯಲ್ಲಿ ಸ್ಯಾಟಲೈಟ್ ಶಿಕ್ಷಣಕ್ಕೆ ಅಗತ್ಯವಿರುವ ಉಪಕರಣಗಳನ್ನು ಸೆಪ್ಟೆಂಬರ್ ವೇಳೆಗೆ ಶಾಲಾ-ಕಾಲೇಜುಗಳಲ್ಲಿ ಅಳವಡಿಸುವಂತೆ ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ರೋಶಿನಿ ಯೋಜನೆ ಅನುಷ್ಠಾನದ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಟೆಕ್ ಅವಾಂತ ಗಾರ್ಡ್ ಸಂಸ್ಥೆಯೊಂದಿಗೆ ಮಾತನಾಡಿದ್ದು, ಶೀಘ್ರವಾಗಿ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

ರೋಶಿನಿ ಯೋಜನೆ ಜಾರಿಯ ಪ್ರಗತಿ ಕುಂಠಿತವಾಗಿದ್ದು, ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಸಭೆ ನಡೆಸಲಾಗಿದೆ. ಅದರಂತೆ ಸೆಪ್ಟೆಂಬರ್ ವೇಳೆಗೆ 156 ಶಾಲೆ ಮತ್ತು ಕಾಲೇಜಿನಲ್ಲಿನ 1 ಸಾವಿರ ತರಗತಿಗಳಿಗೆ 64 ಇಂಚಿನ ಟಿವಿ ಅವಳಡಿಕೆ ಹಾಗೂ ಸ್ಯಾಟಲೈಟ್ ಶಿಕ್ಷಣಕ್ಕೆ ಅಗತ್ಯ ಡಿಜಿಟಲ್ ಉಪಕರಣಗಳ ಅಳವಡಿಕೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಡಿಜಿಟಲ್ ಉಪಕರಣ ಅಳವಡಿಕೆಗೆ ಕೆಲವೆಡೆಗಳಲ್ಲಿ ತರಗತಿ ದುರಸ್ತಿ, ಕಟ್ಟಡಗಳಿಗೆ ಬಣ್ಣ ಬಳಿಯುವ ಕೆಲಸಗಳು ಬಾಕಿಯಿದ್ದು, ಶಾಲೆಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಶಾಲೆಯಲ್ಲಿ ಎಷ್ಟು ತರಗತಿಗಳನ್ನು ದುರಸ್ತಿ ಮಾಡಬೇಕು ಎಂಬ ಪಟ್ಟಿ ಮಾಡಲಾಗಿದ್ದು, ಜುಲೈ ತಿಂಗಳೊಳಗೆ ದುರಸ್ತಿ ಕಾರ್ಯ ಮತ್ತು ಬಣ್ಣ ಬಳಿಯುವುದು ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

40 ತರಗತಿಗಳ ನಿರ್ಮಾಣ: ಪಾಲಿಕೆಯ ಪ್ರತಿ ಶಾಲೆಯಲ್ಲಿ ತಲಾ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ತಲಾ 40 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ 3 ಶಾಲೆಗಳಿಗೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.

ಪ್ರತಿ ತಿಂಗಳು ಪರಿಶೀಲನೆ: 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸ್ಯಾಟಲೈಟ್ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಗುರಿ ಹೊಂದಿದ್ದು, ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಮತ್ತು ಪ್ರತಿ 3 ತಿಂಗಳಿಗೊಮ್ಮೆ ಮೇಯರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಆ ಮೂಲಕ ಯೋಜನೆ ಜಾರಿಗೆ ವೇಗ ನೀಡಲು ನಿರ್ಧರಿಸಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News