ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿಯೇ ಸಿಗಲಿದೆ ಕಾಲೇಜುಗಳ ವಿವರ
ಬೆಂಗಳೂರು, ಮೇ 11: ಪ್ರಸಕ್ತ ಸಾಲಿನಿಂದ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗಾಗಿ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಂಪೂರ್ಣ ಮಾಹಿತಿಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
2019-20ನೇ ಸಾಲಿಗೆ ಸರಕಾರಿ ಪದವಿ ಕಾಲೇಜಿನಲ್ಲಿ ದಾಖಲಾತಿ ಪಡೆಯ ಬಯಸುವ ವಿದ್ಯಾರ್ಥಿಗಳು ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್, ಪ್ರಾಧ್ಯಾಪಕರು, ತರಗತಿ ವೇಳಾಪಟ್ಟಿ ಹಾಗೂ ಸೌಲಭ್ಯಗಳ ಮಾಹಿತಿಗಾಗಿ ಕಾಲೇಜಿನಿಂದ ಕಾಲೇಜಿಗೆ ಅಲೆದಾಡುವ ಅಗತ್ಯವಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿಯೇ ಮಾಹಿತಿ ಸಿಗಲಿದೆ.
ರಾಜ್ಯದ 412 ಸರಕಾರಿ ಕಾಲೇಜುಗಳು ವೆಬ್‌ಸೈಟ್ ಸಿದ್ಧಪಡಿಸಿದ್ದು, ಇಲಾಖೆಯ ಅಂತರ್ಜಾಲ ತಾಣದಲ್ಲಿ ಲಿಂಕ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಅದನ್ನು ತೆರೆದು, ತಮಗೆ ಬೇಕಾದ ಸರಕಾರಿ ಪದವಿ ಕಾಲೇಜಿನ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಲ್ಲ ಸರಕಾರಿ ಕಾಲೇಜಿನ ವೆಬ್‌ಸೈಟ್ ಏಕರೂಪದಲ್ಲಿದ್ದು, ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ದೊರೆಯಲಿದೆ. ಕಾಲೇಜಿನ ಇತಿಹಾಸದ ಮೆಲುಕು, ಮಿಷನ್, ಗುರಿ ಮತ್ತು ವಿಷನ್ ಈ ಮೂರು ಅಂಶಗಳು ಮುಖ್ಯಪುಟದಲ್ಲಿಯೇ ಸಿಗಲಿದೆ.
ಏನೇನು ಸಿಗಲಿದೆ: ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್‌ಗಳು, ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಸಂಪೂರ್ಣ ವಿವರ ದೊರೆಯಲಿದೆ. ಎಷ್ಟು ಕೋರ್ಸ್‌ಗಳು ಮತ್ತು ಅಲ್ಲಿರುವ ವಿಭಾಗಗಳ ವಿವರವು ದೊರೆಯಲಿದೆ. ಅಲ್ಲದೆ, ಅಲ್ಲಿನ ಖಾಯಂ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ಕಾಲೇಜು ಸಿಬ್ಬಂದಿ ಮಾಹಿತಿಯೂ ಲಭ್ಯವಾಗಲಿದೆ. ಯಾವ ವಿಭಾಗಕ್ಕೆ ಯಾವ ಪ್ರಾಧ್ಯಾಪಕರು ಎಂಬ ಮಾಹಿತಿಯೂ ಇದರಲ್ಲಿ ಸಿಗಲಿದೆ.
ವೆಬ್‌ಸೈಟ್‌ನ ಸ್ಟುಡೆಂಟ್ ಸಪೋರ್ಟ್ ವಿಭಾಗದಲ್ಲಿ ಎನ್ಸಿಸಿ, ಎನ್‌ಎಸ್‌ಎಸ್, ರೇಂಜರ್, ರೋವರ್, ರ‍್ಯಾಗಿಂಗ್ ತಡೆ ಸಮಿತಿ ಮತ್ತು ಪ್ಲೇಸ್‌ಮೆಂಟ್ ಸೆಲ್‌ಗಳ ಮಾಹಿತಿ ನೀಡಲಾಗಿದೆ.
ಸೋಮವಾರದಿಂದ ಶನಿವಾರದವರೆಗಿನ ಎಲ್ಲ ವಿಷಯದ ವೇಳಾಪಟ್ಟಿ ಇಲ್ಲಿ ಸುಲಭವಾಗಿ ಸಿಗುತ್ತದೆ. ಜತೆಗೆ ಕಳೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ವಿವಿಧ ಕೋರ್ಸ್‌ಗಳ ಪಠ್ಯಕ್ರಮವೂ ಲಭ್ಯವಿದೆ. ಕಾಲೇಜಿನ ಗ್ರಂಥಾಲಯ ಮತ್ತು ಆನ್‌ಲೈನ್‌ನಲ್ಲಿ ಓದಬಹುದಾದ ಪುಸ್ತಕ ಮತ್ತು ಅದರ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗಲಿದೆ.
ಆನ್‌ಲೈನ್ ಅರ್ಜಿ ಇಲ್ಲ: ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾಡಲಾಗಿತ್ತು. ಆದರೆ, ಸರಿಯಾಗಿ ನಿರ್ವಹಿಸಿಲ್ಲ. ಹೀಗಾಗಿ, 2019-20ನೇ ಸಾಲಿಗೆ ಪದವಿ ಕಾಲೇಜಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವ ವೆಬ್‌ಸೈಟ್‌ವೊಂದನ್ನು ಕಾಲೇಜು ಶಿಕ್ಷಣ ಇಲಾಖೆ ಅಭಿವೃದ್ಧಿ ಪಡಿಸುತ್ತಿದೆ.
ಅದು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸಿಗದೇ ಇರುವುದರಿಂದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಾಲೇಜಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳ ಪೂರ್ಣ ವಿವರವನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತದೆ.
ಬಳಕೆ ಹೇಗೆ?: ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್ dce.kar.nic.in ಅನ್ನು ತೆರೆದರೆ, ಮುಖ ಪುಟದ ಎಡಭಾಗದಲ್ಲಿ 412 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವೆಬ್‌ಸೈಟ್‌ಗಳ ಲಿಂಕ್ ಕಂಡುಬರುತ್ತದೆ. ಅದನ್ನು ತೆರೆದರೆ ನಿಮಗೆ ಬೇಕಾದ ಕಾಲೇಜು ಬರುತ್ತದೆ. ಕಾಲೇಜಿನ ಹೆಸರಿನ ಮೇಲೆ ಕ್ಲಿಕ್ಕಿಸಿ, ಮಾಹಿತಿ ಪಡೆಯಬಹುದು.