×
Ad

ಐಸಿಎಫ್ಟಿಸಿ ಸಂಸ್ಥೆಯಿಂದ 47 ಕೋಟಿ ರೂ. ವಂಚನೆ: ಹೂಡಿಕೆದಾರರ ಆರೋಪ

Update: 2019-05-11 22:42 IST

ಬೆಂಗಳೂರು, ಮೇ 11: ಇಂದಿರಾನಗರ ಚಿಟ್ ಫಂಡ್ ಆ್ಯಂಡ್ ಟ್ರೇಡಿಂಗ್ ಕಂಪನಿ ಲಿಮಿಟೆಡ್ (ಐಸಿಎಫ್ಟಿಸಿ) ಸಂಸ್ಥೆ 190ಕ್ಕೂ ಅಧಿಕ ಹೂಡಿಕೆದಾರರಿಗೆ ಒಟ್ಟು 47 ಕೋಟಿ ರೂ. ವಂಚನೆ ಮಾಡಿದೆ ಎಂದು ವಂಚನೆಗೆ ಒಳಗಾಗಿರುವ ಶ್ರೀನಿವಾಸ್ ಆರೋಪಿಸಿದ್ದಾರೆ. 

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1976 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಲ್ಲಿಯವರೆಗೆ ನೂರಾರು ಕೋಟಿ ಹಣವನ್ನು ಸಂಗ್ರಹಿಸುತ್ತಾ ತನ್ನ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಬೇನಾಮಿ ಹೆಸರಿನಲ್ಲಿ ಆಸ್ತಿ-ಪಾಸ್ತಿ ಮಾಡಲಾಗಿದೆ. ಸಂಸ್ಥೆಯಲ್ಲಿ ಚೀಟಿ ಹಾಕಿದ ಸುಮಾರು 190ಕ್ಕೂ ಹೆಚ್ಚು ಮಂದಿಗೆ ಚೀಟಿ ಅವಧಿ ಮುಗಿದ 2 ವರ್ಷಗಳು ಕಳೆದರೂ ತಮ್ಮ ಹಣವನ್ನು ಹಿಂತಿರುಗಿಸದೇ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಎಷ್ಟೋ ಜನ ಕಷ್ಟ ಪಟ್ಟು ಚಿಟ್ ಫಂಡ್‌ನಲ್ಲಿ 1 ರಿಂದ 10 ಲಕ್ಷ ರೂ.ಗಳವರೆಗೆ ಚೀಟಿ ಕಟ್ಟುತ್ತಿದ್ದರು. ಚೀಟಿ ಮುಗಿದ ಬಳಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಚಂದ್ರಶೇಖರ ಬಾಬು ಹಣ ನೀಡದೆ ಚೆಕ್ ವಿತರಿಸಿದ್ದಾರೆ. ಆದರೆ, ಅಕೌಂಟ್‌ನಲ್ಲಿ ಹಣವಿಲ್ಲದ ಪರಿಣಾಮ ಚೆಕ್‌ಬೌನ್ಸ್ ಆಗಿದೆ. ಇನ್ನು ಕೆಲವು ಚೆಕ್‌ಗಳು ಫ್ರೀಜ್ ಆಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಆಸ್ತಿ ಮಾರಿ ಹಣ ಹಿಂತಿರುಗಿಸುವುದಾಗಿ ತಿಳಿಸಿದ್ದು, ಈವರೆಗೆ ಯಾರೊಬ್ಬರಿಗೂ ಹಣ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.

ಈ ಸಂಬಂಧ ಎ.30 ರಂದು ಸಹಕಾರ ಇಲಾಖೆಯ ಡೆಪ್ಯೂಟಿ ರಿಜಿಸ್ಟ್ರಾರ್ ಅವರಿಗೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದೂರು ದಾಖಲಿಸಿಕೊಂಡ ಡೆಪ್ಯೂಟಿ ರಿಜಿಸ್ಟ್ರಾರ್ ಅವರು ಚೀಟಿ ಸದಸ್ಯರಿಗೆ ಹಣ ನೀಡುವಂತೆ ತಿಳಿಸಿದರೂ, ಹಣ ನೀಡದೇ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ಬಾಬು, ರವಿಕುಮಾರ್ ಸೇರಿದಂತೆ ಇನ್ನಿತರ ಪಾಲುದಾರರು ಪರಾರಿಯಾಗಿದ್ದಾರೆ.

ಆದ್ದರಿಂದ ಮೇ 2 ರಂದು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿರುವ ಆರೋಪದ ಅಡಿ ದೂರು ದಾಖಲಿಸಲಾಗಿದ್ದು, ಸಾರ್ವಜನಿಕರಿಗೆ ವಂಚಿಸಿದ ಚಂದ್ರಶೇಖರ್ ಬಾಬು, ರವಿಕುಮಾರ್ ಅವರಿಗೆ ಶಿಕ್ಷಿಸಿ ಸಾರ್ವಜನಿಕರ ಹಣವನ್ನು ಹಿಂತಿರುಗಿಸಿಕೊಡಬೇಕೆಂದು ರಿಜಿಸ್ಟ್ರಾರ್ ಅವರಿಗೆ ಮನವಿ ಮಾಡಿದರು.

ವಂಚನೆಗೆ ಒಳಗಾದ ಶಂಕರ್ ಮಾತನಾಡಿ, ಈ ಸಂಸ್ಥೆಯಲ್ಲಿ ನಮ್ಮ ಮಕ್ಕಳ ಮದುವೆಗಾಗಿ 10 ಲಕ್ಷ ರೂ. ಚೀಟಿ ಹಾಕಿದ್ದೆ. ಆದರೆ ಚೀಟಿ ಮುಗಿದ ಬಳಿಕ ಹಣ ವಾಪಸ್ ನೀಡದೆ ಕಚೇರಿ ಮುಚ್ಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಎಫ್ಐಆರ್ ಆದರೂ, ಈವರೆಗೆ ಆರೋಪಿಯನ್ನು ಬಂಧಿಸಿಲ್ಲ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News