ಭಾರತದಲ್ಲಿ ಆನ್‌ಲೈನ್ ಖರೀದಿಗಾರರ ಬೆನ್ನುಬಿದ್ದಿರುವ ಹ್ಯಾಕರ್‌ಗಳು: ವರದಿಯಲ್ಲಿ ಉಲ್ಲೇಖ

Update: 2019-05-12 16:45 GMT

ಹೊಸದಿಲ್ಲಿ, ಮೇ 12: ಭಾರತದಲ್ಲಿ ಅಂತರ್‌ಜಾಲ ಬಳಕೆದಾರರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವಂತೆ ಹ್ಯಾಕರ್‌ಗಳು ಇದೀಗ ತಮ್ಮ ಗಮನವನ್ನು ಭಾರತದ ಆನ್‌ಲೈನ್ ಖರೀದಿಗಾರರ ಮೇಲೆ ಕೇಂದ್ರೀಕರಿಸಿರುವುದಾಗಿ ವರದಿಗಳು ತಿಳಿಸಿವೆ.

ಭಾರತದಲ್ಲಿ 450 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು, 550 ಮಿಲಿಯನ್‌ಗೂ ಹೆಚ್ಚು ಅಂತರ್‌ಜಾಲ ಬಳಕೆದಾರರಿದ್ದಾರೆ. ಇದರಲ್ಲಿ ನಗರಪ್ರದೇಶದಲ್ಲಿ 366 ಮಿಲಿಯನ್ ಇಂಟರ್‌ನೆಟ್ ಚಂದಾದಾರರು, ಗ್ರಾಮೀಣ ಪ್ರದೇಶದಲ್ಲಿ 194 ಮಿಲಿಯನ್ ಇಂಟರ್‌ನೆಟ್ ಚಂದಾದಾರರಿದ್ದಾರೆ ಎಂದು ಭಾರತದ ಟೆಲಿಕಾಂ ನಿಯಂತ್ರಕ ಪ್ರಾಧಿಕಾರ(ಟ್ರಾಯ್)ದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

ದುರುದ್ದೇಶಪೂರಿತ ವ್ಯಕ್ತಿಗಳು ತಮ್ಮ ನೆಟ್‌ವರ್ಕ್‌ನೊಳಗೆ ನುಸುಳುವುದನ್ನು ತಡೆಗಟ್ಟಲು ಕಂಪ್ಯೂಟರ್ ಆಧಾರಿತ ತರಬೇತಿ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಬಹುತೇಕ ಜನ ನಂಬುವುದಿಲ್ಲ ಎಂದು ‘ಸೊಫೋಸ್’ನ ಹಿರಿಯ ಭದ್ರತಾ ಸಲಹೆಗಾರ ಜಾನ್ ಶಿಯರ್ ಹೇಳಿದ್ದಾರೆ.

   ಭಾರತದ ಶೇ.86ರಷ್ಟು ಅಂತರ್‌ಜಾಲ ಬಳಕೆದಾರರು ತಮ್ಮ ಸಂಭಾಷಣೆಯನ್ನು ಕದ್ದಾಲಿಸುವ ಅಥವಾ ತಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಿಂದ ಮಾಹಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಆತಂಕಿತರಾಗಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆ ಸಲಹಾತಜ್ಞರ ಸಂಸ್ಥೆ ಕೆಪಿಎಂಜಿಯ ವರದಿ ತಿಳಿಸಿದೆ. ತಮ್ಮ ಕುರಿತ ಮಾಹಿತಿಗಳನ್ನು ರಿಟೈಲರ್‌ಗಳು ದುರುಪಯೋಗ ಪಡಿಸುತ್ತಿದ್ದಾರೆ ಅಥವಾ ಅಕ್ರಮವಾಗಿ ಹಂಚುತ್ತಿದ್ದಾರೆ ಎಂಬ ಆತಂಕ ಶೇ.87ರಷ್ಟು ಗ್ರಾಹಕರಲ್ಲಿದೆ ಎಂದು ವರದಿ ತಿಳಿಸಿದೆ.

   ಅಂತರ್‌ಜಾಲ ಸಂಪರ್ಕದ ಪ್ರಸರಣವು ಮಾಹಿತಿ ಸುರಕ್ಷತೆ ಮತ್ತು ಗೌಪ್ಯತೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ನಿಯಂತ್ರಕರು ಕಡ್ಡಾಯ ಮಾಹಿತಿ ಭದ್ರತೆ ಅವಶ್ಯಕತೆಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕೆಪಿಎಂಜಿ ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆ ವಿಭಾಗದ ಮುಖ್ಯಸ್ಥ ಅತುಲ್ ಗುಪ್ತಾ ಹೇಳಿದ್ದಾರೆ.

 ಇತ್ತೀಚೆಗೆ ವರದಿಯಾಗಿರುವ ಸೈಬರ್ ದಾಳಿಗಳು ಸಂಸ್ಥೆಗಳ ಒಳಗೆ ಮತ್ತು ಹೊರಗೆ ನಡೆಯುವ ಭದ್ರತಾ ಅಪಾಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಉದ್ಯೋಗಿಗಳು ಸುರಕ್ಷತಾ ಉಲ್ಲಂಘನೆಯ ಅಪಾಯದ ಬಗ್ಗೆ ಸೂಕ್ಷ್ಮಗ್ರಾಹಿಗಳಾಗುವ ಅನಿವಾರ್ಯತೆಯಿದೆ ಮತ್ತು ಇಂತಹ ಸಂದರ್ಭಗಳನ್ನು ಎದುರಿಸುವ ಬಗ್ಗೆ ಅವರಿಗೆ ತರಬೇತಿ ನೀಡಬೇಕಿದೆ ಎಂದು ಟಾಟಾ ಕಮ್ಯುನಿಕೇಷನ್ಸ್‌ನ ಸೈಬರ್ ಭದ್ರತೆ ವಿಭಾಗದ ನಿರ್ದೇಶಕಿ ಗೌರಿ ಬಜಾಜ್ ಹೇಳಿದ್ದಾರೆ.

ಸೈಬರ್ ಭದ್ರತೆಯ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಪ್ರತೀ ವ್ಯಕ್ತಿಗೆ ಸಂಬಂಧಿಸಿ ವ್ಯಕ್ತಿಗತ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಜಿಒಕ್ಯುಐಐನ ಸ್ಥಾಪಕ ಮತ್ತು ಸಿಇಒ ವಿಶಾಲ್ ಗೊಂಡಾಲ್ ಅಭಿಪ್ರಾಯ ಪಟ್ಟಿದ್ದಾರೆ.

ಕೇವಲ ಮಾಹಿತಿ ತಂತ್ರಜ್ಞಾನ ಸುರಕ್ಷಾ ತಂಡವಿದ್ದರೆ ಸಾಲದು. ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಆನ್‌ಲೈನ್‌ನಲ್ಲಿ ನಡೆಯುವ ಬ್ಯಾಂಕಿಂಗ್ ಹಾಗೂ ಇತರ ಆರ್ಥಿಕ ಸಂಸ್ಥೆಗಳ ವ್ಯವಹಾರಕ್ಕೆ ವಿಶಿಷ್ಟ , ಸಂಕೀರ್ಣ ಪಾಸ್‌ವರ್ಡ್ ಬಳಸಬೇಕು. ಇತರರಿಗೆ ಪಾಸ್‌ವರ್ಡ್ ಮ್ಯಾನೇಜರ್ ಬಳಸಬೇಕು. ಅಲ್ಲದೆ ಎರಡು ಅಂಶದ ದೃಢೀಕರಣ ವ್ಯವಸ್ಥೆ(2ಎಫ್‌ಎ)ಯ ಮೂಲಕ ಖಾತೆಗಳಿಗೆ ಹೆಚ್ಚುವರಿ ಸುರಕ್ಷಾ ವಲಯದ ಭದ್ರತೆ ಒದಗಿಸಬೇಕು ಎಂದು ಜಾನ್ ಶಿಯರ್ ಹೇಳಿದ್ದಾರೆ. ಇ-ಮೇಲ್‌ನಲ್ಲಿ ಅಪರಿಚಿತ ಮೂಲಗಳಿಂದ ಬರುವ ಆಕರ್ಷಕ ಕೊಡುಗೆಗಳಿಗೆ ಮಾರುಹೋಗಿ ಅವನ್ನು ಕ್ಲಿಕ್ ಮಾಡಿದರೆ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News