ವಿಧಾನಸೌಧ ಸಮೀಪವೇ ವ್ಯಕ್ತಿಯ ಹತ್ಯೆ
ಬೆಂಗಳೂರು, ಮೇ 12: ವಿಧಾನಸೌಧ ಬಳಿಯ ಕೆ.ಆರ್.ವೃತ್ತದಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಶಿವನಾಯಕ್ ಕೊಲೆಯಾಗಿದ್ದ ವ್ಯಕ್ತಿಯಾಗಿದ್ದು, 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹೊಸ್ಕೆರೆಹಳ್ಳಿಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವನಾಯಕ್, ಕಂಟ್ರಾಕ್ಟರ್ ವೇಣುಗೋಪಾಲ್ ಬಳಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ತಡರಾತ್ರಿ ವೇಣುಗೋಪಾಲ್, ಶಿವನಾಯಕ್‌ರನ್ನು ಫೋನ್ ಮಾಡಿ ಕೆಲಸಕ್ಕೆ ಕರೆದಿದ್ದರು. ಆ ಹಿನ್ನೆಲೆಯಲ್ಲಿ ನೃಪತುಂಗ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಶಿವನಾಯಕ್ ನಿಗೂಢವಾಗಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.
ಶಿವನಾಯಕ್ ಅವರ ಮೊಬೈಲ್ ಅನ್ನು ದುಷ್ಕರ್ಮಿಗಳು ಸುಲಿಗೆ ಮಾಡಿ ಹೋಗುತ್ತಿದ್ದಾಗ ಅವರನ್ನು ಶಿವನಾಯಕ್ ಬೆನ್ನಟ್ಟಿಕೊಂಡು ಹೋಗಿದ್ದರು. ಈ ವೇಳೆ ಸುಲಿಗೆಕೋರರೇ ಮಾರಕಾಸ್ತ್ರಗಳಿಂದ ಇರಿದು, ಹತ್ಯೆ ಮಾಡಿ ಪರಾರಿಯಾಗಿರಬಹುದು ಎಂದು ಹಲಸೂರು ಗೇಟ್ ಠಾಣಾ ಪೊಲೀಸರು ಮೊದಲು ಶಂಕಿಸಿದ್ದರು. ಆದರೆ, ಘಟನೆ ಬಳಿಕ ಶಿವನಾಯಕ್ ಜೇಬಿನಲ್ಲೇ ಅವರ ಮೊಬೈಲ್ ಫೋನ್ ಇತ್ತು ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಕೆಲಸ ನಡೆಯತ್ತಿದ್ದಾಗ ಕಾಂಟ್ರಾಕ್ಟರ್ ವೇಣುಗೋಪಾಲ್ ಹಾಗೂ ಶಿವನಾಯಕ್ ನಡುವೆ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ಹಿನ್ನೆಲೆ ಹಲಸೂರು ಗೇಟ್ ಪೊಲೀಸ್ ಠಾಣೆ ಎದುರು ಶಿವನಾಯಕ್‌ರ ನೂರಾರು ಸಂಬಂಧಿಕರು ಪ್ರತಿಭಟನೆ ನಡೆಸಿ, ವೇಣುಗೋಪಾಲ್ ಕಡೆಯವರೇ ಶಿವನಾಯಕ್‌ನನ್ನು ಹತ್ಯೆಗೈದಿದ್ದಾರೆ ಎಂದು ದೂರಿದ್ದಾರೆ.
ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.