ಭೂಮಿಗಿಂತ ಹೆಚ್ಚಿನ ಸಹನೆ ತಾಯಿಯದು: ಹಿರಿಯ ನಟ ಡಿಂಗ್ರಿ ನಾಗರಾಜ್
ಬೆಂಗಳೂರು, ಮೇ 12: ಭೂಮಿಗಿಂತ ಹೆಚ್ಚಿನ ಸಹನೆ ತಾಯಿಯದು. ಅವಳ ಮಮತೆ, ಪ್ರೀತಿಗೆ ಜಗತ್ತಿನಲ್ಲಿ ಸಾಟಿಯಾದದ್ದು ಯಾವುದೂ ಇಲ್ಲ ಎಂದು ಎಂದು ಸಿನೆಮಾ ಹಿರಿಯ ನಟ ಡಿಂಗ್ರಿ ನಾಗರಾಜ್ ಅಭಿಪ್ರಾಯಪಟ್ಟರು.
ರವಿವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ, ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣು ಜೀವಕ್ಕೆ ಮಾತ್ರ ಒದಗಿ ಬಂದ ಬೆಲೆಕಟ್ಟಲಾಗದ ಅನುಭೂತಿಯೆಂದರೆ ತಾಯ್ತನ. ಈ ಸಹಜ ಅನುಭವಕ್ಕೆ ತೆರೆದುಕೊಂಡವರೆಲ್ಲರೂ ದೈವಸ್ವರೂಪವನ್ನು ಅಲಂಕರಿಸುವ ದೊಡ್ಡ ಪರಂಪರೆ ಈ ಮಣ್ಣಿನಲ್ಲಿದೆ ಎಂದು ನುಡಿದರು. ಹೆತ್ತ ತಾಯಿಯ ಋಣ ತೀರಿಸಲಾಗದು. ಆದರೆ ತಾಯಿ ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಜೀವನ ಕಳೆಯುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳು ಸ್ವಲ್ಪ ಭಾರ ಇಳಿಸಿಕೊಳ್ಳಬಹುದು ಎಂದು ನಾಗರಾಜ್ ಹೇಳಿದರು.
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಉಪಾಧ್ಯಕ್ಷ ಆಡುಗೋಡಿ ಶ್ರೀನಿವಾಸ್ ಮಾತನಾಡಿ, ತಾಯಿಯೊಬ್ಬಳು ಇದ್ದರೆ ನೂರು ಜನ ಬಂಧುಗಳಿದ್ದಂತೆ. ತಾಯಿ ತನ್ನೆಲ್ಲ ಕಷ್ಟಕಾರ್ಪಣ್ಯ ಬದಿಗಿಟ್ಟು ಮಕ್ಕಳ ಸರ್ವಾಂಗೀಣ ಶ್ರೇಯಸ್ಸಿಗೋಸ್ಕರ ಎಂಥ ತ್ಯಾಗವನ್ನಾದರೂ ಮಾಡುತ್ತಾಳೆ ಎಂದರು.
ಈ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ಹೋರಾಟ ಸಮಿತಿ ಅಧ್ಯಕ್ಷ ಜಿ.ಸದಾನಂದ, ಸಂಘದ ಕಾರ್ಯದರ್ಶಿ ನಟರಾಜು, ಉಪಾಧ್ಯಕ್ಷೆ ನವನೀತಾ ಸೇರಿದಂತೆ ಪ್ರಮುಖರಿದ್ದರು.