ವಿಮೆನ್ಸ್ ಚಾಲೆಂಜ್ ಪ್ರಶಸ್ತಿ ಎತ್ತಿದ ಸೂಪರ್ ನೋವಾಸ್

Update: 2019-05-12 19:04 GMT

ಜೈಪುರ, ಮೇ 12: ಮೊದಲ ಆವೃತ್ತಿಯ ವಿಮೆನ್ಸ್ ಟಿ -20 ಚಾಲೆಂಜ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ವೆಲೊಸಿಟಿ ತಂಡದ ವಿರುದ್ಧ 4 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಸೂಪರ್‌ನೋವಾಸ್ ತಂಡ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 122 ರನ್‌ಗಳ ಸವಾಲನ್ನು ಪಡೆದ ಸೂಪರ್‌ನೋವಾಸ್ ತಂಡ ನಿಗದಿತ 20 ಓವರ್‌ಗಳಲ್ಲಿ 125 ರನ್ ಗಳಿಸಿತು.

ನಾಯಕಿ ಹರ್ಮನ್‌ಪ್ರೀತ್ ಕೌರ್ 51ರನ್(37ಎ, 4ಬೌ.3ಸಿ), ಪ್ರಿಯಾ ಪೂನಿಯಾ(29), ಜೆಮಿಮಾ ರೋಡ್ರಿಗಸ್ (22) ಮತ್ತು ರಾಧಾ ಯಾದವ್(ಔಟಾಗದೆ 10) ರನ್ ಗಳಿಸಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಎತ್ತಲು ನೆರವಾದರು.

13,000 ಪ್ರೇಕ್ಷಕರಿಂದ ತುಂಬಿಕೊಂಡಿದ್ದ ಜೈಪುರದ ಸ್ಟೇಡಿಯಂನಲ್ಲಿ ಸೂಪರ್‌ನೋವಾಸ್ ಅಂತಿಮ ಕ್ಷಣದಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ರಾಧಾ ಯಾದವ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

   ನಾಯಕಿ ಹರ್ಮನ್‌ಪ್ರೀತ್ ಕೌರ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 51 ರನ್ ಕೊಡುಗೆ ಫಲವಾಗಿ ಸೂಪರ್‌ನೋವಾಸ್ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 115 ತಲುಪಿತ್ತು. 19.2ನೇ ಓವರ್‌ನಲ್ಲಿ ಅಮೆಲಿಯಾ ಕೇರ್ ಎಸೆತದಲ್ಲಿ ಕೌರ್ ಅವರು ಹಾಯ್‌ಲೈ ಮ್ಯಾಥ್ಯೂಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಸೂಪರ್‌ನೋವಾಸ್ ಒತ್ತಡಕ್ಕೆ ಸಿಲುಕಿತ್ತು. 4 ಎಸೆತಗಳಲ್ಲಿ 7 ರನ್ ಮಾಡಬೇಕಿತ್ತು. ಆದರೆ ರಾಧಾ ಯಾದವ್ 4 ಎಸೆತಗಳಲ್ಲಿ 10 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಲೊಸಿಟಿ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತ್ತು. ವಿಕೆಟ್ ಕೀಪರ್ ಸುಷ್ಮಾ ವರ್ಮಾ ಔಟಾಗದೆ 40ರನ್, ಅಮೆಲಿಯಾ ಕೆರ್ ಔಟಾಗದೆ 36ರನ್, ಶಫಾಲಿ ವರ್ಮಾ 11ರನ್, ನಾಯಕಿ ಮಿಥಾಲಿ ರಾಜ್ 12 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News