×
Ad

ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-05-13 10:46 IST

ಬೆಂಗಳೂರು, ಮೇ 13: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖಂಡರ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಸರಕಾರ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜಾಧ್ಯಕ್ಷ ಎಚ್. ವಿಶ್ವನಾಥ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಅವರನ್ನು ಮುಖ್ಯಮಂತ್ರಿ ಆಗುವಂತೆ ಮಾಡಿದ್ದು ನಾನು. ಆದರೆ, ಇದೀಗ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಕೆಲವರು ಅವರ ಪರ ‘ಚೇಲಾಗಿರಿ’ ಮಾಡುತ್ತಿದ್ದಾರೆಂಬ ವಿಶ್ವನಾಥ್ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ಸಮ್ಮಿಶ್ರ ಸರಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಮುಂದೆ ಯಾರು: ಮತ್ತೊಂದು ಟ್ವಿಟ್‌ನಲ್ಲಿ ‘ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ, ಈಗ ವಿಶ್ವನಾಥ್...ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಬೀರೇಶ್ವರ ಬುದ್ಧಿ ಕೊಡಲಿ: ‘ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಿ, ಬಂದು ಉತ್ತರಿಸುತ್ತೇನೆ. ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟ್ವಿಟ್ಟರ್ ಮೂಲಕವೇ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.

‘ಮೈತ್ರಿ ಧರ್ಮಕ್ಕೆ ಧಕ್ಕೆ ಬರುವ ‘ನಾನೇ ಮುಖ್ಯಮಂತ್ರಿ’ ಎನ್ನುವ ವಿಷಯ ಪ್ರಸ್ತಾವನೆ ಪ್ರಥಮವಾಗಿ ಸಿದ್ದರಾಮಯ್ಯನವರೆ ನಿಮ್ಮಿಂದಲೇ ಆಗಿದ್ದು. ನನ್ನ ಹೇಳಿಕೆ ಬಹಳ ಜವಾಬ್ದಾರಿಯುತವಾಗಿದೆ. ಕಿಡಿಗೇಡಿತನ, ಕುಖ್ಯಾತಿ, ಎಲ್ಲರನ್ನೂ ಏಕವಚನದಲ್ಲಿ ಸಂಭೋದಿಸುವುದು, ಸುಳ್ಳು ಹೇಳುವುದು ನನ್ನ ಜನ್ಮದಲ್ಲಿ, ನನ್ನ ರಕ್ತದಲ್ಲಿಯೆ ಬಂದಿಲ್ಲ ಎಂದು ಮತ್ತೊಂದು ಟ್ವಿಟ್‌ನಲ್ಲಿ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ದಾರಿ ನೋಡಿಕೊಳ್ಳಲಿ: ‘ಮೈತ್ರಿ ಕಷ್ಟ ಆದರೆ ಅವರ ದಾರಿ ಅವರು ನೋಡಿಕೊಳ್ಳಲಿ. ನಮಗೆ ಎರಡೂ ಪಕ್ಷಗಳಿಗಿಂತ ಕಡಿಮೆ ಸೀಟು ಬಂದಿದ್ದು ನಿಜ. ಆದರೆ, ಸಿಎಂ ಮಾಡಿ ಎಂದು ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರಾಗಿಯೇ ಸಿಎಂ ಮಾಡ್ತೀವಿ ಅಂತಾ ಬಂದಿದ್ದರು’ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿದ್ದಾರೆ.

‘ಗುಲಾಂ ನಬಿ ಅಝಾದ್ ಜೊತೆ ನಡೆದ ಮಾತುಕತೆ ವೇಳೆ ನಾನೂ ಇದ್ದೆ. ಈಗ ಸಿಎಂ ವಿರುದ್ಧ ಹಾದಿ-ಬೀದಿಯಲ್ಲಿ ಮಾತಾಡುವುದು ಸರಿಯಲ್ಲ. ಮೈತ್ರಿ ಕಷ್ಟ ಆದರೆ ತಮ್ಮ ದಾರಿ ನೋಡಿಕೊಳ್ಳಲಿ. ಅದನ್ನು ಬಿಟ್ಟು ಸಿಎಂಗೆ ತೊಂದರೆ ಕೊಡುವುದು ಬೇಡ ಎಂದು ಕುಪೇಂದ್ರ ರೆಡ್ಡಿ ಮನವಿ ಮಾಡಿದ್ದಾರೆ.

‘ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತೆ, ಇತಿಹಾಸ ಸ್ಮರಿಸುತ್ತದೆ. ದೇವರಾಜ ಅರಸು ಅವರ ಜನಪರ ಕೆಲಸಗಳನ್ನು ಮರೆತು ಜನ ಸೋಲಿಸಿದರು. ಅವರನ್ನು ಗುರುಗಳೆಂದು ಈಗ ಹೇಳುತ್ತಿರುವ ನಾಯಕರೂ ಬಿಟ್ಟು ಓಡಿಹೋಗಿದ್ದರು. ಆದರೆ ಅರಸು ಅವರನ್ನು ಈಗ ಇತಿಹಾಸ ಸ್ಮರಿಸುತ್ತಿದೆ. ಈರ್ಷ್ಯೆಗೆ ಕಾಲವೇ ಉತ್ತರ ನೀಡಲಿದೆ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಉತ್ತರ ನೀಡಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿ ಎಂಬ ಹೆಮ್ಮೆ ನನ್ನದು. ಇದನ್ನು ಪುಸ್ತಕ ಮಾಡಿ ಹಂಚಿದ್ದೇನೆ, ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ದ. ಮೈಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ನನ್ನ ವಾದ ಇಲ್ಲ

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸುವ ಕುರಿತು ಬಿಜೆಪಿ ನಾಯಕರು ಕನಸು ಕಾಣಲಿ. ನಾವು ಅವರನ್ನು ತಡೆಯುವುದಿಲ್ಲ. ಆದರೆ, ಮೈತ್ರಿ ಸರಕಾರವು 5 ವರ್ಷದ ಅವಧಿಯನ್ನು ನಿಸ್ಸಂಶಯವಾಗಿ ಪೂರೈಸಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಮೈತ್ರಿ ಸರಕಾರ ಬೀಳುವುದು ಖಚಿತ ಎಂದು ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಆದರೆ, ಸರಕಾರವು ಈಗಾಗಲೇ ಒಂದು ವರ್ಷ ಪೂರೈಸಿದೆ

-ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News