ದೇವರು-ವಿಜ್ಞಾನ ಎಣ್ಣೆ ಸೀಗೆಕಾಯಿ: ಪರಿಸರ ಬರಹಗಾರ ನಾಗೇಶ್ ಹೆಗಡೆ
ಬೆಂಗಳೂರು, ಮೇ 13: ದೇವರು ಮತ್ತು ವಿಜ್ಞಾನ ಎಣ್ಣೆ ಸೀಗೆಕಾಯಿ ತರಹ ಇದ್ದು, ದೇಶದಲ್ಲಿ ಸೀಗೆಕಾಯಿ ದಿನೇ ದಿನೇ ಅಧಿಕವಾಗುತ್ತಿದೆ ಎಂದು ಪರಿಸರ ಬರಹಗಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಸರಕಾರಿ ಕಲಾ ಕಾಲೇಜು ಆಯೋಜಿಸಿದ್ದ ‘ಸಂಕಥನ’ ಬಹುಶಿಸ್ತೀಯ ಅಧ್ಯಯನ ನೆಲೆಗಳ ವಿಚಾರ ಸಂಕಿರಣ ಸಪ್ತಾಹದಲ್ಲಿ ಮಾತನಾಡಿದ ಅವರು, ಎಲ್ಲವುಗಳ ಯೋಗಕ್ಷೇಮ ನೋಡಿಕೊಳ್ಳುವವ ದೇವರು. ಆದರೆ ಭೂಕಂಪನ, ಜ್ವಾಲಾಮುಖಿಯಂತಹ ಪ್ರಕೃತಿ ವಿಕೋಪಗಳು ಉಂಟಾಗಿ ಜೀವಹಾನಿ ಆಸ್ತಿ- ಪಾಸ್ತಿ ಹಾನಿ ಉಂಟಾಗುವುದು ಏಕೆ? ದೀನ ದಲಿತರಿಗೆ ಒಳ್ಳೆಯದು ಆಗಬೇಕು. ಏಕೆ ಆಗುತ್ತಿಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ದೇವರು ಇದ್ದಾನೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ದೇವರ ಅಸ್ತಿತ್ವ ತಾರ್ತಿಕವಾಗಿ ಯೋಚಿಸಿದಾಗ ಇಲ್ಲ. ಆದರೆ ದೇವರು ಇದ್ದಾನೆ. ಹೇಗೆಂದರೆ ಇತ್ತೀಚಿಗೆ ಸಂಭವಿಸಿದ ಫೋನಿ ಚಂಡುಮಾರುತದ ಬಗ್ಗೆ ಮೊದಲೇ ಸುಳಿವು ನೀಡಿದ್ದು ವಿಜ್ಞಾನ. ಹೀಗಾಗಿ, ಚಂಡುಮಾರುತವನ್ನು ಅರಿತು ಸಾವಿರಾರು ಜನರು ತಮ್ಮ ಪ್ರಾಣವನ್ನು ಬದುಕಿಸಿಕೊಂಡರು. ಇದು ವಿಜ್ಞಾನದಿಂದ ಸಾಧ್ಯವಾಗಿದೆ. ಅಲ್ಲದೆ, ಅನೇಕ ಜನರು ಭೀಕರ ಖಾಯಿಲೆಗಳಿಂದ ಸಾಯುತ್ತಾರೆ. ದೇವರು ಇರುವಿಕೆ ನಿಜವಾಗಿದ್ದರೆ ಇದನ್ನೆಲ್ಲ ತಪ್ಪಿಸಬಹುದಿತ್ತು ಎಂದು ವಿವರಿಸಿದರು.
ಮನುಷ್ಯ ದೇವರು ಮಾಡಬೇಕಾದ ಸಕಲ ಕಾರ್ಯವನ್ನು ಮಾಡುತ್ತಿದ್ದು, ಸಮಾಜದಲ್ಲಿ ಎಲ್ಲರಿಗೂ ಸಮಾನತೆ ನೀಡಲು ಸೂಕ್ತವಾದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗವನ್ನು ರಚಿಸಿದ್ದಾನೆ. ಅಲ್ಲದೆ, ಸಾವಿರಾರು ವರ್ಷಗಳ ಹಿಂದೆ ವಿಶ್ವದ ಮಹಾಸ್ಫೋಟ (ಕಪ್ಪು ರಂಧ್ರ) ನಡೆದಾಗ ಭೂಮಿ ಸೃಷ್ಟಿಯಾಯಿತು. ಹೀಗಾಗಿ, ನಾವು ಇಲ್ಲಿ ದೇವರ ಪ್ರಾರ್ಥನೆ ಮಾಡಬೇಕಾಗಿಲ್ಲ. ವಿಜ್ಞಾನದ ಚಿಂತನೆಗಳನ್ನು ಮಾಡಬೇಕು ಎಂದರು.
ವಿಜ್ಞಾನ ಇಲ್ಲದಿದ್ದರೆ ನಾವು ಯಾರು ಇರುತ್ತಿರಲಿಲ್ಲ. ನಮ್ಮ ಜೀವನದ ಪ್ರತಿ ಗಳಿಗೆಯೂ ಪ್ರತಿ ಆಯಾಮವೂ ವಿಜ್ಞಾನವೇ ಆಗಿರುತ್ತೆ. ಜೀವಿಗಳ ಉಗಮಕ್ಕೆ ಅವಶ್ಯಕವಾದ ವಾತಾವರಣ ಇದ್ದಿದರಿಂದಲೇ ಭೂಮಿಯಲ್ಲಿ ನಾವು ಇರುವುದು. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತುಂಬಾ ವಿಕೃತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲೇ ಮೊದಲು ಅಣು ಸ್ಥಾವರವವನ್ನು ವಿರೋಧಿಸಿದ್ದು ಹಾಗೂ ಕುದುರೆ ಮುಖ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ನಿಂದ ನಿಷೇಧ ತಂದಿದ್ದು ರಾಜ್ಯದವರು. ಇಷ್ಟೊಂದು ಜಾಗೃತಿ ಮೂಡಲು ಸಾಹಿತಿಗಳಾದ ಶಿವರಾಮ ಕಾರಂತ, ಬಿಜಿಎಲ್ ಸ್ವಾಮಿ, ಲಕ್ಷಣ್ ರಾವ್‌ರಂತಹವರ ಹೋರಾಟದ ಫಲ. ಇನ್ನು ತೇಜಸ್ವಿಯವರು ಪರಿಸರ ವಿಜ್ಞಾನಿಯಲ್ಲದಿದ್ದರೂ ಪಶ್ಚಿಮ ಘಟ್ಟದ ಪರಿಸರ ಸಂಪತ್ತಿನ ಅರಿವನ್ನು ತಿಳಿಸಿಕೊಟ್ಟರು ಎಂದು ಹೇಳಿದರು.
ದೇಶದಲ್ಲಿ ಶೇ.40ರಷ್ಟು ಆಹಾರ ಪದಾರ್ಥ ವ್ಯರ್ಥವಾಗುತ್ತಿದ್ದು, ರಾಜ್ಯದ ರಾಜಧಾನಿಯಲ್ಲಿನ ಕಲ್ಯಾಣ ಮಂಟಪಗಳಲ್ಲಿ ಪ್ರತಿ ವರ್ಷ 943 ಟನ್‌ನಷ್ಟು ಆಹಾರ ವ್ಯರ್ಥ ಮಾಡಲಾಗುತ್ತಿದೆ. ಅಲ್ಲದೆ, ನಗರದಲ್ಲಿರುವ ಒಂದೊಂದು ಹಸುಗಳ ಹೊಟ್ಟೆಯಲ್ಲಿ 15 ಕೆಜಿಯಷ್ಟು ಪ್ಲಾಸಿಕ್ಟ್ ಇದೆ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಿದರು.
ಮಂಗಳ ಗ್ರಹದಲ್ಲಿನ ಉಪಗ್ರಹ 400 ಕಿಲೋಮೀಟರ್ ಅಂತರದಲ್ಲಿ ಅಲ್ಲಿನ ಮಿಥೇನ್ ಇರುವಿಕೆಯನ್ನು ಗ್ರಹಿಸುತ್ತದೆ. ಆದರೆ ಭಯೋತ್ಪಾಕ ನಿಗ್ರಹ ದಳಕ್ಕಿಂತ ಹೆಚ್ಚು ಜನ ಮೂತ್ರ ಗುಂಡಿಗಳಲ್ಲಿ ಸಾಯುತ್ತಿದ್ದಾರೆ. ಅದಕ್ಕೆ ಕಾರಣ ಮಿಥೇನ್ ಆಗಿದ್ದು, ವಿಜ್ಞಾನಿಗಳು, ಸಾಹಿತಿಗಳು ಹಾಗೂ ಮಾಧ್ಯಮದವರು ಏಕೆ ಪ್ರಶ್ನೆ ಮಾಡುತ್ತಿಲ್ಲ ?
-ನಾಗೇಶ್ ಹೆಗಡೆ, ಪರಿಸರ ಬರಹಗಾರ