ನಿಯಮ ಉಲ್ಲಂಘಿಸಿ ಟೆಂಡರ್: ಲೋಕೋಪಯೋಗಿ ಇಲಾಖೆಯ ಮೂವರ ವಿರುದ್ಧ ಎಸಿಬಿಗೆ ದೂರು

Update: 2019-05-13 14:50 GMT

ಬೆಂಗಳೂರು, ಮಾ 13: ನಿಯಮ ಉಲ್ಲಂಘಿಸಿ ಟೆಂಡರ್ ನೀಡಿದ ಆರೋಪದಡಿ ಲೋಕೋಪಯೋಗಿ ಇಲಾಖೆ ಕಟ್ಟಡಗಳ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ.ವೆಂಕಟೇಶ್ ಸೇರಿ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ ದೂರು ನೀಡಿದೆ.

ಸೋಮವಾರ ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಕೇಂದ್ರ ಕಚೇರಿಯಲ್ಲಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ, ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೆ.ವೆಂಕಟೇಶ್, ಸಹಾಯಕ ಅಭಿಯಂತರ ಗಂಗಾಲಕ್ಷ್ಮಿ, ಭುವನ್ ಪ್ರಸಾದ್ ಅವರು, ತಮಗೆ ಆಪ್ತರಾಗಿರುವ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿ ನೀಡಿದ್ದಾರೆ. ಇದರಿಂದ ಸರಕಾರದ ಖಜಾನೆಗೆ ಭಾರೀ ಮೊತ್ತದ ಹಣ ನಷ್ಟವಾಗಿದೆ ಎಂದು ಆರೋಪ ಮಾಡಿದರು.

ಪಾರದರ್ಶಕ ಕಾಯ್ದೆ ಪ್ರಕಾರ ಅಭಿಯಂತರರು ಟೆಂಡರ್ ಆಹ್ವಾನಿಸಿಲ್ಲ. ಜಿಲ್ಲಾಧಿಕಾರಿಗಳಿಗೆ ಟೆಂಡರ್ ಕುರಿತು ಮಾಹಿತಿ ರವಾನಿಸಬೇಕು. ಜೊತೆಗೆ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಆದರೆ, ಲೋಕೋಪಯೋಗಿ ಇಲಾಖೆ ಕಟ್ಟಡಗಳ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ.ವೆಂಕಟೇಶ್ ಸೇರಿ ಮೂವರು ಇ-ಟೆಂಡರ್ ಮೂಲಕ ಗುತ್ತಿಗೆದಾರರಿಗೆ ಸ್ಪರ್ಧಾತ್ಮಕವಾಗಿ ಕಡಿಮೆ ದರ ನಮೂದಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಹೇಳಿದರು.

ಸುಮಾರು 100 ಕೋಟಿಗಳ ಕಾಮಗಾರಿಗಳನ್ನು 5 ಲಕ್ಷಗಳಿಗೆ ವಿಭಜಿಸಿ ಒಂದೇ ಡಿಡಿಯನ್ನು ಬಹಳಷ್ಟು ಕಾಮಗಾರಿಗಳಿಗೆ ಬಳಸಿಕೊಂಡಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಎಸಿಬಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹದೇವಸ್ವಾಮಿ ಒತ್ತಾಯ ಮಾಡಿದರು.

ನಿಯಮ ಏನಿದೆ?

ಸರಕಾರದ ಆದೇಶದ ಪ್ರಕಾರ ಸುತ್ತೋಲೆ ಸಂಖ್ಯೆ 178 ಐಎಫ್‌ಎ 2016 ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡಗಳ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ.ವೆಂಕಟೇಶ್ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಆಹ್ವಾನಿಸಿದ್ದಾರೆ ಎಂದು ಮಹದೇವಸ್ವಾಮಿ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News