ಈ ಸುಡುಬಿಸಿಲಿನಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಇಲ್ಲಿದೆ ಟಿಪ್ಸ್…

Update: 2019-05-13 12:59 GMT

ಬೇಸಿಗೆಯ ಸುಡುಬಿಸಿಲು ಎಲ್ಲೆಡೆ ಕಾಯುತ್ತಿದೆ. ಜನರು ಮನೆಗಳಿಂದ ಹೊರಬೀಳಲು ಹಿಂದೆಮುಂದೆ ನೋಡುವಂತಾಗಿದೆ. ಬಿಸಿಲಿನಿಂದಾಗಿ ಚರ್ಮ ಕಂದು ಬಣ್ಣಕ್ಕೆ ತಿರುಗುವುದು,ಒಣಗುವುದು ಮತ್ತು ಸುಟ್ಟಗಾಯಗಳು ಇವೆಲ್ಲ ಪ್ರತಿ ಬೇಸಿಗೆಯಲ್ಲಿ ನಾವು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ. ಸುಡುಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಕೆಲವು ಸರಳ ಟಿಪ್ಸ್ ಇಲ್ಲಿವೆ....

►ಕೊಡೆ, ಸನ್‌ಗ್ಲಾಸ್ ಬಳಸಿ

 

 ಮಳೆಗಾಲದಲ್ಲಿ ಮಾತ್ರವಲ್ಲ,ಬೇಸಿಗೆಯಲ್ಲಿಯೂ ಕೊಡೆ ನಿಮ್ಮ ಜೊತೆಗಾರನಾಗಿದ್ದರೆ ಅದು ಸೂರ್ಯನ ಕಿರಣಗಳಿಂದ ನಿಮಗೆ ರಕ್ಷಣೆ ನೀಡುತ್ತದೆ. ಸನ್‌ಗ್ಲಾಸ್‌ ಗಳನ್ನು ಧರಿಸುವುದು ಕಣ್ಣಿನ ರಕ್ಷಣೆಗೆ ಅತ್ಯುತ್ತಮವಾಗಿದೆ. ತಲೆಗೆ ಅಗಲವಾದ ಅಂಚುಗಳುಳ್ಳ ಹ್ಯಾಟ್‌ಗಳನ್ನು ಧರಿಸಬಹುದು. ಸ್ಕಾರ್ಫ್‌ಗಳೂ ಬಿಸಿಲಿನಿಂದ ರಕ್ಷಣೆ ನೀಡುತ್ತವೆ. ಅದರಿಂದ ತಲೆ ಮತ್ತು ಮುಖವನ್ನು ಬಿಸಿಲಿನ ಬಾಧೆಯಿಂದ ತಪ್ಪಿಸಬಹುದು.

►ತಂಪಾಗಿರುವ ಬಟ್ಟೆಗಳನ್ನು ಧರಿಸಿ

 ಬೇಸಿಗೆಯ ದಿನಗಳಲ್ಲಿ ಲಘು ಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸುವುದು ಉತ್ತಮ. ಇಂತಹ ಬಟ್ಟೆಗಳು ಚರ್ಮಕ್ಕೆ ಗಾಳಿಯಾಡಲು ನೆರವಾಗುವ ಜೊತೆಗೆ ಹೊರಗೆ ನರಕಸದೃಶ ಬಿಸಿ ವಾತಾವರಣವಿದ್ದಾಗ ಶರೀರವನ್ನು ತಂಪಾಗಿರಿಸುತ್ತವೆ. ಸಡಿಲವಾದ ಉದ್ದ ತೋಳಿನ ಉಡುಪು ಉತ್ತಮ ರಕ್ಷಣೆಯನ್ನು ನೀಡುತ್ತದೆ. ಮಹಿಳೆಯರು ಸ್ಲೀವ್‌ಲೆಸ್ ಮತ್ತು ಶಾರ್ಟ್ಸ್‌ಗಳನ್ನು ತೊಡಲು ಬಯಸಿದರೆ ಹೊರಗಡಿಯಿಡುವಾಗ ಸೂಕ್ತ ಸನ್‌ಸ್ಕ್ರೀನ್ ಬಳಸಬೇಕು. ಗಾಢ ಬಣ್ಣದ ಮತ್ತು ಬಿಗಿಯಾದ ಉಡುಪುಗಳು ಬೇಸಿಗೆಗೆ ಹೇಳಿಸಿದ್ದಲ್ಲ. ಅವು ಚರ್ಮವನ್ನು ಬಿಸಿಯಾಗಿಸಿ ಅತಿಯಾಗಿ ಬೆವರುವಂತೆ ಮಾಡುತ್ತವೆ ಮತ್ತು ಚರ್ಮ ಸುಲಭವಾಗಿ ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತವೆ.

►ಯಥೇಚ್ಛ ನೀರು ಸೇವಿಸಿ

 ಬೇಸಿಗೆಯ ದಿನಗಳಲ್ಲಿ ದ್ರವಗಳ ಸೇವನೆಯನ್ನು ಹೆಚ್ಚಿಸುವುದು ಅಗತ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಸಿಲಿನ ದಿನಗಳಲ್ಲಿ ಯಥೇಚ್ಛವಾಗಿ ನೀರು ಸೇವಿಸುವುದರಿಂದ ಶರೀರದ ನಿರ್ಜಲೀಕರಣವನ್ನು ತಡೆಯುವ ಜೊತೆಗೆ ಚರ್ಮವನ್ನು ಆರೋಗ್ಯಯುತವಾಗಿರಿಸಲು ನೆರವಾಗುತ್ತದೆ. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿರುವುದರಿಂದ ಶರೀರವು ಹೆಚ್ಚು ನೀರನ್ನು ಕಳೆದುಕೊಳ್ಳುತ್ತದೆ. ದಿನಕ್ಕೆ 2ರಿಂದ 3 ಲೀ.ನೀರನ್ನು ಸೇವಿಸುವುದು ಒಳ್ಳೆಯದು. ನೀರಿನ ಜೊತೆಗೆ ಎಳನೀರು ಮತ್ತು ಮಜ್ಜಿಗೆಯಂತಹ ಪಾನೀಯಗಳನ್ನೂ ಧಾರಾಳವಾಗಿ ಸೇವಿಸಿ. ಆದರೆ ಇಂಗಾಲೀಕೃತ ಅಥವಾ ಸಕ್ಕರೆಯುಕ್ತ ಪಾನೀಯಗಳಿಂದ ದೂರವಿರಿ. ಈ ಪಾನೀಯಗಳು ಶರೀರದ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುವ ಜೊತೆಗೆ ದೀರ್ಘಾವಧಿಯಲ್ಲಿ ಚರ್ಮಕ್ಕೂ ಹಾನಿಯನ್ನುಂಟು ಮಾಡುತ್ತವೆ.

►ಚರ್ಮವನ್ನು ಆರ್ದ್ರಗೊಳಿಸಿ

ಚರ್ಮವನ್ನು ಆರ್ದ್ರಗೊಳಿಸುವುದು ಚರ್ಮವು ಒಣಗುವುದನ್ನು ತಡೆಯಲು ನೆರವಾಗುವುದರಿಂದ ಅದು ಚಳಿಗಾಲದಲ್ಲಿ ಮಾತ್ರ ಅಗತ್ಯವೇ ಹೊರತು ಬೇಸಿಗೆಯ ದಿನಗಳಲ್ಲಲ್ಲ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಬೇಸಿಗೆಯ ಬಿಸಿಲು ಶರೀರದಲ್ಲಿ ನೀರಿನ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಇದರಿಂದ ಚರ್ಮವು ಒರಟಾಗುತ್ತದೆ ಮತ್ತು ಒಣಗುತ್ತದೆ. ಶುಷ್ಕಚರ್ಮವು ಸುಲಭವಾಗಿ ಹಾನಿಗೊಳಗಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿಯೂ ಚರ್ಮಕ್ಕೆ ಮಾಯಿಶ್ವರೈಸರ್‌ಗಳನ್ನು ಬಳಸಬೇಕು.

►ಸನ್ ಸ್ಕ್ರೀನ್ ಉಪಯೋಗಿಸಿ

ಸನ್‌ಸ್ಕ್ರೀನ್ ಬಳಕೆಯು ಬೇಸಿಗೆಯಲ್ಲಿ ಚರ್ಮದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಹಾನಿಕಾರಕವಾದ ಸೂರ್ಯನ ಅಲ್ಟ್ರಾ-ವಯೊಲೆಟ್ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಬಿಸಿಲು ಚರ್ಮಕ್ಕೆ ಹಾನಿಯನ್ನುಂಟು ಮಾಡುವ ಜೊತೆಗೆ ಶುಷ್ಕತೆ,ಕಪ್ಪುಕಲೆಗಳು,ಸನ್‌ಟ್ಯಾನ್‌ನಂತಹ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಹಾನಿಕಾರಕ ಸೂರ್ಯಕಿರಣಗಳಿಂದ ಚರ್ಮಕ್ಕೆ ರಕ್ಷಣೆ ನೀಡಬೇಕಿದ್ದರೆ ಮನೆಯಿಂದ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಅಗತ್ಯವಾಗಿ ಬಳಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News