ಕಲ್ಯಾಣಮ್ಮರ ಕೃತಿಗಳನ್ನು ಮರುಪ್ರಕಟಿಸಲು ಸಿದ್ಧ: ಡಾ.ಮನು ಬಳಿಗಾರ್
ಬೆಂಗಳೂರು, ಮೇ 13: ಮಕ್ಕಳ ಕೂಟ ಸ್ಥಾಪಕಿ ಆರ್.ಕಲ್ಯಾಣಮ್ಮ ಅವರು ರಚಿಸಿರುವ ಮಕ್ಕಳ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಕೊಟ್ಟರೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅದನ್ನು ಪ್ರಕಟಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.
ಸೋಮವಾರ ನಗರದ ಮಕ್ಕಳ ಕೂಟದಲ್ಲಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸ್ಥಾಪಕರ ದಿನಾಚರಣೆ ಹಾಗೂ 14 ನೆ ಮಕ್ಕಳ ಕಣ್ಮಣಿ ಆರ್.ಕಲ್ಯಾಣಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣಮ್ಮ ಅವರು ಮಕ್ಕಳ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ, ಅವುಗಳಲ್ಲಿ ಬಹುತೇಕ ನಾಶವಾಗಿವೆ. ಹೀಗಾಗಿ, ನಾಶವಾಗಿರುವ ಎಲ್ಲ ಪುಸ್ತಕಗಳನ್ನು ಒಂದು ತಿಂಗಳೊಳಗೆ ಸಂಗ್ರಹಿಸಿ ನೀಡಿದರೆ ಕಸಾಪದಿಂದ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.
ಧೀಮಂತ ಹಾಗೂ ಕ್ರಾಂತಿಕಾರಿ ಮಹಿಳೆಯಾಗಿದ್ದ ಕಲ್ಯಾಣಮ್ಮ ಮಕ್ಕಳು ಹಾಗೂ ಮಹಿಳೆಯರ ಏಳಿಗೆಗಾಗಿ ಸಾಕಷ್ಟು ದುಡಿದಿದ್ದಾರೆ. ಅಲ್ಲದೆ, ಸಮಾಜಕ್ಕಾಗಿ ಜೀವನದುದ್ದಕ್ಕೂ ತ್ಯಾಗಮಯವಾದ ಹೋರಾಟ ನಡೆಸಿದ್ದಾರೆ. ಶಾರದ ಸ್ತ್ರೀ ಸಮಾಜ ಸ್ಥಾಪಿಸಿದ್ದ ಅವರು, 1938 ರಲ್ಲಿ ಮಕ್ಕಳ ಕೂಟ ಸ್ಥಾಪಿಸಿದರು ಎಂದು ಅವರು ಹೇಳಿದರು.
ಪ್ರಿಯಂವಧೆ, ನಿರ್ಭಾಗ್ಯವನಿತೆ, ಸುಖಾಂತ, ಭಕ್ತೆ ಮೀರಾ, ಮಾಧವಿ, ನಿರ್ಮಲಾ, ಪಂಚಕಜ್ಜಾಯ, ಕನ್ನಡಿ, ಹಿಂದೂಸ್ಥಾನ, ಇಂದಿರೆ ಪ್ರಿಯಂವಧೆ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ, ನಾಡು-ನುಡಿಗಾಗಿ ಅವಿರತವಾಗಿ ದುಡಿದ ಕಲ್ಯಾಣಮ್ಮ ನಿಜವಾಗಿ ಆದರ್ಶ ಮಹಿಳೆಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳ ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದರೆ ಕಸಾಪದಿಂದ ಶೇಕಡ ಅರ್ಧದಷ್ಟು ಖರ್ಚನ್ನು ಭರಿಸಲಾಗುತ್ತದೆ. ಮಕ್ಕಳಿಗೆ ಇಂದಿನಿಂದಲೇ ಸಾಹಿತ್ಯದ ರುಚಿ ಹತ್ತಿಸಬೇಕು. ಅವರು ಬೆಳೆಯುತ್ತಾ ಹೋದಂತೆ ಸಾಹಿತ್ಯಾಸಕ್ತರಾಗುತ್ತಾರೆ ಎಂದು ಹೇಳಿದರು.
ಸಮಾರಂಭದಲ್ಲಿ ನಾಗಭೂಷಣ್‌ರಾವ್ ಹಾಗೂ ಬಿ.ಎಸ್.ಸ್ವಾಮಿ ಅವರಿಗೆ ಆರ್.ಕಲ್ಯಾಣಮ್ಮ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.