ಬಿಬಿಎಂಪಿ ಉಪ ಚುನಾವಣೆಗೆ ಮೈತ್ರಿ ಅಭ್ಯರ್ಥಿಗಳ ಆಯ್ಕೆ

Update: 2019-05-13 14:48 GMT

ಬೆಂಗಳೂರು, ಮೇ 13: ಉಪಮೇಯರ್ ರಮೀಳಾ ಉಮಾಶಂಕರ್, ಸದಸ್ಯ ಏಳುಮಲೈರ ಅಕಾಲಿಕ ನಿಧನದಿಂದ ತೆರವಾಗಿದ್ದ 2 ಬಿಬಿಎಂಪಿ ವಾರ್ಡ್‌ಗಳ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿ ಮಾತ್ರ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿಸಿದೆ.

ಸೋಮವಾರ ನಗರದಲ್ಲಿ ಕಾವೇರಿಪುರ ವಾರ್ಡ್ ಅಭ್ಯರ್ಥಿ ಆಯ್ಕೆ ಕುರಿತಂತೆ ಶಾಸಕ ಕೆ.ಗೋಪಾಲಯ್ಯ, ಮಾಜಿ ಶಾಸಕ ಪ್ರಿಯಕೃಷ್ಣ, ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸುಶೀಲಾ ಸುರೇಶ್ ಅವರನ್ನು ಅಂತಿಮಗೊಳಿಸಲಾಯಿತು. ಹಾಗೇ ಅವರಿಗೆ ಬಿ.ಫಾರಂ ನೀಡಲಾಗಿದ್ದು, ಸುಶೀಲಾ ಸುರೇಶ್ ಅವರು ಮೇ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಸಗಾಯಪುರ ವಾರ್ಡ್‌ನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಏಳುಮಲೈ ಅವರ ಸಹೋದರಿ ಪಳನಿಯಮ್ಮ ಸ್ಪರ್ಧಿಸಲಿದ್ದಾರೆ. ಕಾವೇರಿಪುರ ವಾರ್ಡ್ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಇದನ್ನು ಭೇದಿಸಲು ಬಿಜೆಪಿ ಸೂಕ್ತ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿದೆ. ಸಗಾಯಪುರ ವಾರ್ಡ್‌ನಲ್ಲಿ ಬಹುತೇಕ ತಮಿಳರೇ ಅಂತಿಮವಾಗಿದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮ ಅವರಿಗೆ ಅನುಕಂಪದ ಅಲೆ ಕೆಲಸ ಮಾಡುವ ಸಾಧ್ಯತೆ ಇದೆ.

ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ರಮೀಳಾ ಉಮಾಶಂಕರ್ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸಲಾಯಿತು. ಆದರೆ, ಅವರ ಕುಟುಂಬ ವರ್ಗದವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸುಶೀಲಾ ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಾವೇರಿಪುರ, ಸಗಾಯಪುರ ವಾರ್ಡ್‌ಗಳ ಉಪ ಚುನಾವಣೆ ಹಿನ್ನಲೆ ಚುನಾವಣಾಧಿಕಾರಿ ನೀತಿ ಸಂಹಿತೆ ಜಾರಿ ಮಾಡಿ, ಆದೇಶ ಹೊರಡಿಸಿದ್ದಾರೆ. ನೀತಿ ಸಂಹಿತೆಯು ಮೇ 31ರವರಗೆ ಇರಲಿದೆ. ನೀತಿ ಸಂಹಿತೆ ಉಲ್ಲಂಘನೆಯಾದರೆ ದೂರವಾಣಿ ಸಂಖ್ಯೆ 080- 23181330 ಸಂಪರ್ಕಿಸಬಹುದು.

* ಮೇ 16ರಂದು ನಾಮಪತ್ರಕ್ಕೆ ಕೊನೆಯ ದಿನ

* ಮೇ 17 ರಂದು ನಾಮಪತ್ರ ಪರಿಶೀಲನೆ

* ಮೇ 19ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆ ದಿನ

* ಮೇ 29ರಂದು 2 ವಾರ್ಡ್‌ನಲ್ಲಿ ಮತದಾನ

* ಮೇ 31 ರಂದು ಫಲಿತಾಂಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News